ಎಂಎಲ್ಸಿ ಚುನಾವಣೆ- ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ಪ್ರಮುಖರ ಸಭೆ

ಬೈಂದೂರು: ಲೋಕಸಭಾ ಚುನಾವಣೆ ಮುಗಿಯುತ್ತಿರುವಂತೆಯೇ ಇದೀಗ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಪದವೀಧರ ಹಾಗೂ ನೈರುತ್ಯ ಶಿಕ್ಷಕರನ್ನು ಸೇರಿ ಎರಡೂ ಕ್ಷೇತ್ರಗಳನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗೆ ರಹದಾರಿ ಕಲ್ಪಿಸವ ನಿಟ್ಟಿನಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೋಮವಾರ ಬೈಂದೂರು ಮಂಡಲ ಬಿಜೆಪಿ ಕಚೇರಿಯಲ್ಲಿ ಮಂಡಲದ ಪ್ರಮುಖರು ಹಾಗೂ ಕಾರ್ಯಕರ್ತರ ವಿಶೇಷ ಸಭೆ ಕರೆದರು.

ಈ ಸಂದರ್ಭ ಮಾತನಾಡಿದ ಅವರು, ವಿವಿಧ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ನಿಗಧಿಯಾದ ಬೆನ್ನಲ್ಲೇ ಅಧಿಕೃತ ಅಭ್ಯರ್ಥಿಯನ್ನು ಬಿಜೆಪಿ ಈಗಾಗಲೇ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ವ್ಯಾಪ್ತಿಗೆ ಬರುವ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಾವೆಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಬೇಕು ಎಂದು ಹೇಳಿದರು.

ಕ್ಷೇತ್ರದಲ್ಲಿರುವ ಪದವೀಧರ ಹಾಗೂ ನೈರುತ್ಯ ಶಿಕ್ಷಕ ಕ್ಷೇತ್ರದ ಮತದಾರರ ಪಟ್ಟಿ ಪಡೆದು, ಮತದಾರರನ್ನು ಸಂಪರ್ಕಿಸಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವೊಲಿಸುವ ಮೂಲಕ ಪಕ್ಷ ಘೋಷಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದಿಂದ ಬರುವ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ. ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ ಸೇರಿದಂತೆ ಮಂಡಲದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.
