BlogHighlightsLocal newsNational NewsPoliticsState newsTop StoriesTrending

ನಾನು ಪಕ್ಷೇತರನಾಗಿ ಸ್ಪರ್ಧಿಸುವೆ : ರಘುಪತಿ ಭಟ್ – ಸ್ಥಳೀಯ ನಾಯಕರಿಗೀಗ ಉಭಯಸಂಕಟ!

Aware others:

ಉಡುಪಿ: ಬಿಜೆಪಿ ತನ್ನನ್ನು ಕಡೆಗಣಿಸುತ್ತಿದೆ ಎನ್ನುವ ಅರಿವಿದ್ದರೂ ಯಾವುದೋ ಮೂಲೆಯಲ್ಲಿ ಒಂದಿಷ್ಟು ನಂಬಿಕೆ ಇಟ್ಟುಕೊಂಡಿದ್ದ ಉಡುಪಿಯ ಮಾಜೀ ಶಾಸಕ ರಘುಪತಿ ಭಟ್ ಗೆ ವಿಧಾನಪರಿಷತ್ತಿನ ಟಿಕೇಟೂ ಕೈತಪ್ಪಿದ ಬಳಿಕ ಮೊದಲ ಬಾರಿಗೆ ಭಟ್ ತಿರುಗಿ ಬಿದ್ದಿದ್ದು, ರಾಜ್ಯ ರಾಜಕೀಯದಲ್ಲಿ ಈಶ್ವರಪ್ಪನವರ ಹಾದಿ ಹಿಡಿದಂತಾಗಿದೆ. 

ಈ ಬಗ್ಗೆ ಇಂದು ಉಡುಪಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್, ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರಕ್ಕೆ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

‘ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಸೋತರೂ ಬಿಜೆಪಿಯಲ್ಲೇ ಇರುತ್ತೇನೆ, ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಇದು ಯಾವುದೇ ಬಂಡಾಯ ಅಥವಾ ಪಕ್ಷ, ವ್ಯಕ್ತಿ ವಿರುದ್ಧವಲ್ಲ. ನನಗಾಗಿ, ಜನರ ಸೇವೆಗಾಗಿ ಕೆಲಸ ಮಾಡಲು ಈ ನಿರ್ಧಾರ ಮಾಡಿದ್ದೇನೆ’ ಎಂದು ಭಟ್ ಹೇಳಿದ್ದಾರೆ.

‘ಕರಾವಳಿಗೆ ಪಕ್ಷದಿಂದ ಅನ್ಯಾಯವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದೇನೆ. ಪಕ್ಷದ ವರಿಷ್ಠರು ಟಿಕೆಟ್ ಭರವಸೆ ನೀಡಿದ್ದರು. ಈಗ ನಿರ್ಧಾರ ಬದಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರಲಿಲ್ಲ. ಆದರೆ ಹಣ ಬಲ, ಜಾತಿ ಬಲಕ್ಕೆ ಟಿಕೆಟ್ ಸಿಕ್ಕಿದೆ. ಹೀಗಾಗಿ ಜನರೊಂದಿಗೆ ಇದ್ದು ಕೆಲಸ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದ್ದೇನೆ’ ಎಂದು ರಘುಪತಿ ಭಟ್ ಹೇಳಿದರು.

ಬಿಜೆಪಿ ನಾಯಕರ ಸ್ಥಿತಿ ಚಿಂತಾಜನಕ!: ಸದ್ಯಕ್ಕೆ ರಾಷ್ಟ್ರ ರಾಜಕಾರಣದಿಂದ ಜಿಲ್ಲಾ ರಾಜಕಾರಣದ ವರೆಗೂ ಬಿಜೆಪಿ ನಾಯಕರ ಸ್ಥಿತಿ ಚಿಂತಾಜನಕವಾಗಿದೆ ಎಂದರೆ ತಪ್ಪಾಗಲಾರದು. ಅಧಿಕಾರಕ್ಕಾಗಿ ಹಪಹಪಿಸುವ ನಾಯಕರು ಟಿಕೆಟ್ ಸಿಕ್ಕರೆ ಸಂತೋಷ. ಸಿಗದೇ ಇದ್ದರೆ ಬೇಸರವಾದರೂ ತೋರ್ಪಡಿಸದ ಪರಿಸ್ಥಿತಿ ಬಹುತೇಕ ಅಸಮಾಧಾನಿತ ಬಿಜೆಪಿ ನಾಯಕರದ್ದಾಗಿದೆ. ಇದಕ್ಕೆ ಈಶ್ವರಪ್ಪರಾದಿಯಾಗಿ, ಸಿಟಿ ರವಿ, ನಳಿನ್ ಕುಮಾರ್ ಕಟೀಲ್, ಪುತ್ತಿಲ, ರಘುಪತಿ ಭಟ್ ಮೊದಲಾದವರೂ ಹೊರತಾಗಿಲ್ಲ ಎನ್ನಲಾಗುತ್ತಿದೆ. ಅದರ ಪರಿಣಾಮವೇ ಟಿಕೆಟ್ ಸಿಗದೇ ಬೇಸರವಿದ್ದರೂ ನಾನು ಬಿಜೆಪಿ ನಾನು ಬಿಜೆಪಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇನಾದರೂ ತನ್ನ ವರ್ಚಸ್ಸು ಕಳೆದುಕೊಂಡಿದ್ದೇ ಆದಲ್ಲಿ ಟಿಕೆಟ್ ವಂಚಿತರು ಕಾಂಗ್ರೆಸ್ ಸೇರುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ ಎನ್ನುವ ಲೆಕ್ಕಾಚಾರಗಳೂ ನಡೆಯುತ್ತಿವೆ. 

ಇದೆಲ್ಲದರ ನಡುವೆ ರಘುಪತಿ ಭಟ್ಟರ ಪ್ರಬಲ ಕಾರ್ಯಕರ್ತರು ಹಾಗೂ ಅವರ ಸ್ನೇಹಿತ ಮುಖಂಡರುಗಳಿಗೆ ಈಗ ಉಭಯ ಸಂಕಟ ಎದುರಾಗಿದೆ. ರಘುಪತಿ ಭಟ್ಟರನ್ನು ಬಿಡಬೇಕೋ ಅಥವಾ ಪಕ್ಷದ ಅಧಿಕೃತ ಅಭ್ಯರ್ಥಿ‌ವಿರುದ್ಧ ಚುನಾವಣೆ ಎದುರಿಸಬೇಕೋ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಇದು ಹೀಗೇ ಮುಂದುವರೆದರೆ ಬಿಜೆಪಿಯ ಬಂಡಾಯ ನಾಯಕರು ಬಿಜೆಪಿಗೆ ತಲೆನೋವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ

ರಘುಪತಿ ಏನು ಹೇಳಿದ್ದಾರೆ? ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ 👇


Aware others:

Leave a Reply

Your email address will not be published. Required fields are marked *

error: Content is protected !!