ಪರಿಸರ ಪ್ರೇಮಿ ಪಕ್ಷಿ ತಜ್ಞ ಖ್ಯಾತ ಚಿತ್ರ ಕಲಾವಿದ ಡಾ. ಹೆಚ್.ಎಸ್.ಮಲ್ಲಿ ನಿಧನ
ಬಂಗಾಲ ಯುದ್ದದಲ್ಲಿ ಗಾಯಾಳುಗಳಿಗೆ ಉಚಿತ ಸೇವೆ ಸಲ್ಲಿಸಿದ್ದ ವೈದ್ಯ ಸೇನಾನಿ!
ಕುಂದಾಪುರ: ಕುಂದಾಪುರದ ಪ್ರಸಿದ್ಧ ಚಿತ್ರ ಕಲಾವಿದ, ಸ್ತ್ರೀ ವೈದ್ಯ, ಪರಿಸರ ಪ್ರೇಮಿ, ಪಕ್ಷಿ ತಜ್ಞ, ಯೆಡ್ತೆರೆ ನರ್ಸಿಂಗ್ ಹೋಂ ಮಾಲೀಕ, ರೊಟೇರಿಯನ್ ಡಾ. ಹೆಚ್. ಶುಭೋದ್ ಕುಮಾರ್ (ಹೆಚ್.ಎಸ್.ಮಲ್ಲಿ) ಮಲ್ಲಿ ವಯೋಸಹಜ ಕಾರಣಗಳಿಂದ ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ನಿಧನರಾದರು.

ಡಾ. ಮಲ್ಲಿ ಅವರು ಸುಮಾರು 60 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗಣನೀಯ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ಪರಿಸರ ಪ್ರೇಮಿಯಾಗಿದ್ದವರು. ಪಕ್ಷಿ ಸಂಕುಲ, ಪ್ರಕೃತಿ, ಸಾಮಾಜಿಕ ಸ್ವಾಸ್ತ್ಯದ ಕುರಿತು ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದ ಅವರು, ಸಾಕಷ್ಟು ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಸ್ತ್ರೀ ರೋಗ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದ ಡಾ. ಮಲ್ಲಿ, ರೋಟರಿ ಕ್ಲಬ್ ಸದಸ್ಯರಾಗಿವಿವಿಧ ಹುದ್ದೆಗಳನ್ನು ಅಲಂಕರಿಸಿ ಸಾಮಾಜಿಕ ಸೇವೆ ಮಾಡಿದ್ದಾರೆ.
ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ.
ಖ್ಯಾತ ಚಿತ್ರ ಕಲಾವಿದರಾಗಿದ್ದ ಡಾ. ಹೆಚ್.ಎಸ್.ಮಲ್ಲಿ, ತಾವು ರಚಿಸಿದ ಕಲಾಕೃತಿಗಳನ್ನು ವಿದೇಶದಲ್ಲಿ ಮಾರಿ ಬಂದ ಹಣದಲ್ಲಿ ಸಾಮಾಜಿಕ ಸೇವೆ ಮಾಡಿದ್ದಾರೆ. ಬಂಗಾಲ ಯುದ್ಧದ ಸಂದರ್ಭ ಗಾಯಾಳು ಸೈನಿಕರಿಗೆ ಉಚಿತ ಸೇವೆ ಸಲ್ಲಿಸಿದ್ದ ಡಾ. ಹೆಚ್.ಎಸ್. ಮಲ್ಲಿ ಕುಟುಂಬ ಮೌನವಾಗಿ ದೇಶಕ್ಕಾಗಿ ವಿಶೇಷ ಸೇವೆ ಸಲ್ಲಿಸಿತ್ತು. ಡಾ. ಹೆಚ್.ಎಸ್. ಮಲ್ಲಿಯವರ ಪತ್ನಿಯೂ ವೈದ್ಯರಾಗಿದ್ದು ಪತಿಯ ಎಲ್ಲಾ ಕಾಳಜಿಯಲ್ಲಿಯೂ ಪಾಲುದಾರಿಕೆ ಹೊಂದಿದ್ದರೆಂದರೆ ಶುಭೋಧ್ ಕುಮಾರ್ ಸಂಸಾರ ಸಮಾಜಕ್ಕೆ ಮಾದರಿ ಎಂದರೆ ತಪ್ಪಾಗದು.
ಇಬ್ಬರು ಪುತ್ರಿಯರ ಪೈಕಿ ಒಬ್ಬರು ಹುಬ್ಬಳ್ಳಿಯಲ್ಲಿದ್ದರೆ ಇನ್ನೊಬ್ಬರು ಪೂನಾದಲ್ಲಿ ಸಂಸಾರ ನಡೆಸುತ್ತಿದ್ದಾರೆ. ಅಪಾರ ಬಂಧು ಬಳಗವನ್ನು ಹೊಂದಿರುವ ಡಾ. ಹೆಚ್.ಎಸ್. ಮಲ್ಲಿ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 1.30ರಿಂದ 4 ಗಂಟೆಯವರೆಗೆ ಅವರ ಸ್ವಗೃಹ ಕುಂದಾಫುರದ ಸಲೀಂ ಆಲಿ ರಸ್ತೆಯಲ್ಲಿರುವ “ಮನೋರಮಾ” ದಲ್ಲಿ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಕ್ಷೇತ್ರದ ಹಿರಿಯರು, ಗಣ್ಯರು, ಹಾಗೂ ಸ್ನೇಹಿತರು ಡಾ. ಹೆಚ್.ಎಸ್.ಮಲ್ಲಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
