ಬೊಲೆರೋ ಅಪಘಾತದಲ್ಲಿ ಒಬ್ಬ ಸಾವು; ಐವರಿಗೆ ಗಾಯ

ಕುಂದಾಪುರ: ಬೊಲೇರೊ ವಾಹನ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ರಾಮಣ್ಣ ಎಂಬಾತ ಸಾವನ್ನಪ್ಪಿ, ಚಾಲಕ ನಿರಂಜನ, ಶಿವಕ್ಕ, ರೇಷ್ಮಾ, ಕಾವ್ಯ, ಪ್ರಜ್ವಲ್ ಎಂಬ ಐವರು ಗಾಯಗೊಂಡ ಘಟನೆ ಎ.28ರಂದು ಬೆಳಗ್ಗಿನ ಜಾವ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಹನಮಂತ ಹಾಗೂ ಮನೆಯವರು ಉಡುಪಿಯಿಂದ ಬೊಲೇರೋ ವಾಹನದಲ್ಲಿ ಅವರ ಮಾವನ ಮಗನ ಮದುವೆಯ ಹಿನ್ನೆಲೆಯಲ್ಲಿ ಬಾದಾಮಿಗೆ ಹೋಗಿ ಎ. 27ರ ಸಂಜೆ ಅಲ್ಲಿಂದ ವಾಪಸ್ ಹೊರಟಿದ್ದರು. ಎ. 28ರ ಬೆಳಗ್ಗಿನ ಜಾವ 4.30ರ ವೇಳೆ ಕಿರಿಮಂಜೇಶ್ವರ ತಲುಪಿದಾಗ ಅಪಘಾತ ಸಂಭವಿಸಿದೆ.
ಡಿವೈಡರ್‌ಗೆ ಢಿಕ್ಕಿಯಾಗಿ ವಾಹನ 50 ಅಡಿ ದೂರ ಸಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ನಿಂತಿತು. ರಾಮಣ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತರಾಗಿರು ವುದಾಗಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
