ಮೇ 3 : ಬೈಂದೂರಿನಲ್ಲಿ ಅಣ್ಣಾಮಲೈ ಬೃಹತ್ ರೋಡ್ ಶೋ – ಕಿಶೋರಕುಮಾರ್
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಸಲುವಾಗಿ ಮೇ 3ರಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಬೈಂದೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದ್ದಾರೆ.

ಮಾಧ್ಯಮದ ಜೊತೆ ಮಂಗಳವಾರ ಮಾತನಾಡಿದ ಅವರು, ಮೇ 3ರಂದು ಬೆಳಿಗ್ಗೆ 9.30ಕ್ಕೆ ಕೊಲ್ಲೂರಿನಲ್ಲಿ ರೋಡ್ ಶೋ ಆರಂಭವಾಗಲಿದೆ. ತದನಂತರ ವಂಡ್ಸೆ, ನೇರಳಕಟ್ಟೆ, ತಲ್ಲೂರು, ತಾರಾಪತಿ, ಉಪ್ಪುಂದ, ಕಿರಿಮಂಜೇಶ್ವರ, ಗುಜ್ಜಾಡಿ ಮಾರ್ಗವಾಗಿ ಗಂಗೊಳ್ಳಿಯಲ್ಲಿ ಬೃಹತ್ ರೋಡ್ ಶೊ ಅಂತ್ಯವಾಗಲಿದೆ ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಸಾಕಾರಕ್ಕಾಗಿ ಮೇ 5ರ ಸಂಜೆ 6 ಗಂಟೆಯವರೆಗೂ ಜಿಲ್ಲಾ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಬೈಂದೂರು ವಿಧಾನಸಭಾ ವ್ಯಾಪ್ತಿಯ ವಿವಿಧ ಜಿಲ್ಲಾ ಪಂಚಾಯತಿಗಳಲ್ಲಿ ಮೊಕ್ಕಾಂ ಹೂಡಲಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜರಿ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನ ಮಾಡಿರುವ ಬಿ.ವೈ. ರಾಘವೇಂದ್ರ ಅವರು ರಾಜ್ಯದ ಓರ್ವ ಮಾದರಿ ಸಂಸದರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ತಮ್ಮದು ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ನಿಜವಾದ ಶಕ್ತಿ ತುಂಬಿರುವುದು ಮೋದಿ ಸರ್ಕಾರ. ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೋಸ ಮಾಡಿತ್ತು, ಅವರನ್ನು ಎರಡು ಬಾರಿ ಸೋಲಿಸಿತ್ತು. ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳನ್ನು ಪಂಚತೀರ್ಥವಾಗಿ ಅಭಿವೃದ್ಧಿ ಪಡಿಸಿದೆ. ಹೀಗಾಗಿ ಸಂವಿಧಾನಕ್ಕೆ ಶಕ್ತಿ ತುಂಬುತ್ತಿರುವುದೇ ಬಿಜೆಪಿ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಪ್ರಮುಖರಾದ ಕುತ್ಯಾರು ನವೀನ್ ಶೆಟ್ಟಿ, ಮಹೇಂದ್ರ ಪೂಜಾರಿ, ಶ್ರೀಗಣೇಶ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
