ಬಡವರ ಹಣ ದೋಚಿ ಗ್ಯಾರೆಂಟಿ ನೀಡಿದ ಕಾಂಗ್ರೆಸ್ ದೇಶಕ್ಕೇ ಮಾರಕ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಬೈಂದೂರು: ದಲಿತರಿಗೆ ಮನೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ಕಾಲೋನಿಗಳ ರಸ್ತೆ, ಚರಂಡಿ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿರುವ ಕಾಂಗ್ರೆಸ್ ದಲಿತರನ್ನು ವಂಚಿಸುತ್ತಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದ್ದಾರೆ. ಅವರು ಭಾನುವಾರ ಕಿರಿಮಂಜೇಶ್ವರದಲ್ಲಿ ನಡೆದ ಬೈಂದೂರು ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ನೀಡುತ್ತಿರುವ ಗ್ಯಾರೆಂಟಿಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದ ಅವರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿರುವ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಡವರು ಉದ್ದಾರವಾಗುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಇರಬೇಕು ಎಂದುಕೊಂಡಿದ್ದಾರೆ. ಗ್ಯಾರೆಂಟಿಗೆ ದಲಿತರಿಗೆ ಮೀಸಲಿಟ್ಟ ಫಂಡೇ ಯಾಕೆ ಬೇಕಿತ್ತು? ಕುರುಬರ, ಒಕ್ಕಲಿಗರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಯಾಕೆ ಬಳಸಿಲ್ಲ? ಎಂದು ಪ್ರಶ್ನಿಸಿದರು.
ನಮ್ಮದೇ ದುಡ್ಡಿನಲ್ಲಿ ಸರ್ಕಾರ ನೀಡುವ ಉಚಿತ ಪಡೆಯಲು ಯಾವುದೇ ಅಂಜಿಕೆ ಬೇಡ. ಆದರೆ ಯೋಚಿಸಿ ಮತದಾನ ಮಾಡಿ. ಕೊರೋನಾ ಸಂದರ್ಭದಲ್ಲಿ ಇಡೀ ದೇಶದ ಜನತೆಗೆ ಉಚಿತ ವ್ಯಾಕ್ಸಿನ್ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎನ್ನುವುದು ನೆನಪಿರಲಿ ಎಂದರು.
ಬೈಂದೂರು ಕ್ಷೇತ್ರದಿಂದಲೇ ಬಿಜೆಪಿಗೆ ಒಂದು ಲಕ್ಷ ಲೀಡ್ ನೀಡುವ ಶಾಸಕ ಗುರುರಾಜ್ ಗಂಟಿಹೊಳೆಯವರ ಸಂಕಲ್ಪ “ಬೂತ್ ಕಡೆಗೆ ಸಮೃದ್ಧ ನಡಿಗೆ” ಮಾದರಿ ಕಾರ್ಯಕ್ರಮವಾಗಿದೆ. ನಾವೆಲ್ಲರೂ ಒಟ್ಟಾಗಿ ಎಸ್ಸಿ, ಎಸ್ಟಿ ಮತಗಳು ಸಂಪೂರ್ಣವಾಗಿ ಬಿಜೆಪಿಗೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ ಬಿ. ವೈ. ರಾಘವೇಂದ್ರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೂತಿನೆಡೆಗೆ ಸಮೃದ್ಧ ನಡಿಗೆ ಮೂಲಕ ಲಕ್ಷ ಲೀಡಿನಲ್ಲಿ ಗೆಲುವು ಸಾಧಿಸಲಿದ್ದಾರೆ. ಮೋದೀಜಿಯವರ 10 ವರ್ಷದ ಆಡಳಿತದ ಬಲ, ಸಮರ್ಥ ನಾಯಕತ್ವ, ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆಯಾಗಿರಲಿದೆ ಎಂದರು.
ಶಾಸಕ ಗಂಟಿಹೊಳೆ ಮಾತನಾಡಿ. ಕ್ಷೇತ್ರದಲ್ಲಿ ಬೂತ್ ಪ್ರಮುಖರ ಸಂಘಟನೆ, ಪೇಜ್ ಪ್ರಮುಖರಿಗೆ ಕಾರ್ಯಾಗಾರ ನಡೆಸಿದ್ದೇವೆ. ಮೂಕಾಂಬಿಕಾ ಕಾರೀಡಾರ್ ಮೂಲಕ ಸಮೃದ್ಧ ಬೈಂದೂರು ಪರಿಕಲ್ಪನೆ ಸಾಕಾರಕ್ಕೆ ಶ್ರಮಿಸಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರಬಾಬು, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ವಿಡಿಯೋ ವೀಕ್ಚಿಸಲು ಇಲ್ಲಿ ಕ್ಲಿಕ್ಕಿಸಿ 👇
https://youtu.be/_kwwiDWYARM?si=jqzUl7s8XCvyRYIT
