ಅಂಬೇಡ್ಕರ್ ಅವರ ಸಂವಿಧಾನದಿಂದಲೇ ನಾವು ಸಮಾನತೆಯಿಂದ ಬದುಕುತ್ತಿದ್ದೇವೆ : ಮಂಜುನಾಥ ಭಂಡಾರಿ
ಕುಂದಾಪುರ: ಅಂದು ಅಂಬೇಡ್ಕರ್ ಅವರು ಸಂವಿಧಾನ ಸಿದ್ಧಪಡಿಸದೇ ಇದ್ದಿದ್ದರೆ ಇಂದು ನಾವೆಲ್ಲರೂ ಇಷ್ಟೊಂದು ಸಮಾನತೆಯಿಂದ ಬದುಕುವುದು ಸಾಧ್ಯವಿರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಅವರು ಭಾನುವಾರ ತೆಕ್ಕಟ್ಟೆಯ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್ ಕುಂದಾಪುರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಶಾಂತಿಯನ್ನು ಸ್ಥಾಪಿಸಲು ಅಂಬೇಡ್ಕರ್ ನೀಡಿದ ಸಂವಿಧಾನ ಶ್ರೇಷ್ಟವಾಗಿದೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿ ಎಂದರು.







ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಮೊದಲು ಅವರ ಮನೆಯ ತುಳಸಿ ಕಟ್ಟೆಗೆ ದೀಪ ಹಚ್ಚುವ ಕೆಲಸ ಮಾಡಲಿ. ನಾವೂ ಹಿಂದೂಗಳೇ. ಆದರೆ ನಮ್ಮ ಮನೆಯಲ್ಲಿ ದೇವರ ಕೆಲಸ, ದೈವಗಳ ಆರಾಧನೆ ಹಿಂದಿನಿಂದಲೇಬನಡೆದುಕೊಂಡು ಬಂದಿದೆ. ಮೋದಿ ಸರ್ಕಾರದ ಜಿಎಸ್ಟಿ ನೀತಿಯಿಂದ ಸಂಭ್ರಮ ಕಡಿಮೆಯಾಗಿದೆ. ನಾವು ಹಿಂದುತ್ವ, ಸಂಪ್ರದಾಯಗಳ ಬಗ್ಗೆ ಬಿಜೆಪಿಯಿಂದ ಕಲಿಯಬೇಕಿಲ್ಲ. ಸುಳ್ಳು ಸರಳತೆಗಳಿಗೆ ಬಲಿಯಾಗಿ ಉತ್ತಮ ಸಂಸದೀಯ ಪಟುವನ್ನು ಕಳೆದುಕೊಳ್ಳಬೇಡಿ ಎಂದರು.

ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಜಯಪ್ರಕಾಶ್ ಹೆಗ್ಡೆಯಂತಹಾ ನಾಯಕತ್ವವನ್ನು ಕಳೆದುಕೊಳ್ಳದಂತೆ ಮತದಾರರು ಎಚ್ಚರವಹಿಸಬೇಕು ಎಂದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ. ಗಫೂರ್ ಮೊದಲಾದವರು ಮಾತನಾಡಿದರು. ಯುವ ಕಾಂಗ್ರೆಸ್ ಮುಖಂಡ ಇಚ್ಛಿತಾರ್ಥ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಕೆಪಿಸಿಸಿ ಕಾರ್ಯದರ್ಶಿ ನವೀನ್ ಚಂದ್ರ ಶೆಟ್ಟಿ, ಕುಂದಾಪುರ ಬ್ಲಾಕ್ಬಕಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ ಕುಂದರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಚುನಾವಣಾ ಉಸ್ತುವಾರಿ ಪ್ರಕಾಶಚಂದ್ರ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಕೋಟ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಮಡಿವಾಳ, ಕುಂದಾಪುರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
