“ತಾಕತ್ತಿದ್ದರೆ ನನಗೆ ಮೋಸ ಮಾಡಿಲ್ಲ ಎಂದು ಯಡಿಯೂರಪ್ಪ ದೇವರ ಮುಂದೆ ಗಂಟೆ ಹೊಡೆಯಲಿ” – ಈಶ್ವರಪ್ಪ ಸವಾಲು
ಕುಂದಾಪುರ: ನನ್ನ ಮಗನಿಗೆ ಹಾವೇರಿಯಲ್ಲಿ ಟಿಕೆಟ್ ಕೊಡುತ್ತೇನೆ ಎಂದು ನಂಬಿಸಿ ವಂಚಿಸಿದ ಯಡಿಯೂರಪ್ಪ ತಾಕತ್ತಿದ್ದರೆ ನನಗೆ ಮೋಸ ಮಾಡಿಲ್ಲ ಎಂದು ದೇವರ ಮುಂದೆ ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ. ಬುಧವಾರ ಬೆಳಿಗ್ಗೆ ಹೆಮ್ಮಾಡಿಯ ಜ್ಯುವೆಲ್ ಪಾರ್ಕಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ನಾನು ಬಾಲ್ಯದಿಂದಲೇ ಆರೆಸ್ಸೆಸ್ಸ್ ಸ್ವಯಂಸೇವಕ. ಸಂಘದ ಸಿದ್ಧಾಂತ ನನ್ನ ರಕ್ತದಲ್ಲಿ ಹರಿಯುತ್ತಿದೆ. ನಾನ್ಯಾವತ್ತೂ ಹಿಂದೂ ವಿರೋಧಿಯಾಗಿಲ್ಲ. ನೈಜ ಹಿಂದೂ ಕಾರ್ಯಕರ್ತರು ನನ್ನ ಜೊತೆ ರಾಜ್ಯದ ಮೂಲೆ ಮೂಲೆಯಿಂದಲೂ ಬೆಂಬಲ ನೀಡುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಮಾತಿಗೆ ಬೆಲೆ ಕೊಟ್ಟು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ಕೈಬಿಟ್ಟೆ. ಯಡಿಯೂರಪ್ಪ ರಾಜ್ಯದ ಏಕೈಕ ನಾಯಕ ಎನ್ನುವಂತೆ ರಾಷ್ಟ್ರೀಯ ನಾಯಕರನ್ನು ನಂಬಿಸಿದ್ದಾರೆ. ಇದು ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಿದೆ. ರಾಷ್ಟ್ರೀಯ ನಾಯಕರು ಕುಟುಂಬ ವಿರೋಧಿ ಸಿದ್ಧಾಂತ ಹೊಂದಿದ್ದು, ನಾನೂ ಕುಟುಂಬ ರಾಜಕೀಯವನ್ನು ವಿರೋಧಿಸುತ್ತಿದ್ದು, ರಾಜ್ಯ ಬಿಜೆಪಿ ಕುಟುಂಬ ರಾಜಕೀಯವನ್ನು ಹೋಗಲಾಡಿಸಿ ಬಿಜೆಪಿಯನ್ನು ಶುದ್ಧಗೊಳಿಸುತ್ತೇನೆ ಎಂದರು.
ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುವ ತೀರ್ಮಾನ ಕೈಗೊಂಡ ಕೂಡಲೇ ಮಠಗಳಿಗೆ ಭೇಟಿ ನೀಡಿ ಎಲ್ಲರಂತೆ ಆಶೀರ್ವಾದ ಪಡೆದಿದ್ದೆ. ಆದರೆ ನಾನು ಹೋದ ಮಠಗಳ ಬಗ್ಗೆ ಯಡಿಯೂರಪ್ಪ ಬೆದರಿಕೆ ಧೋರಣೆ ತಳೆದರು. ನಮ್ಮ ಕಾರ್ಯಕರ್ತರನ್ನೂ ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ ಎಂದರು.
ನರೇಂದ್ರ ಮೋದಿ ವಿಶ್ವ ನಾಯಕರು. ಅವರ ಭಾವಚಿತ್ರವನ್ನು ಹಾಕಬಾರದು ಎನ್ನುವುದಕ್ಕೆ ಅದೇನು ಯಡಿಯೂರಪ್ಪನವರ ಅಪ್ಪನ ಆಸ್ತಿಯಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ಅಂಬೇಡ್ಕರ್, ಭಗತ್ ಸಿಂಗ್, ನರೇಂದ್ರ ಮೋದಿ ಎಲ್ಲರ ಭಾವಚಿತ್ರಗಳನ್ನು ಹಾಕುವ ಹಕ್ಕು ಎಲ್ಲರಿಗೂ ಇದೆ. ಸಾಧ್ಯವಾದರೆ ಅದನ್ನು ಯಡಿಯೂರಪ್ಪ ತಡೆಯಲಿ ಎಂದರು.
ಹಳ್ಳಿ ಹಳ್ಳಿಗಳಿಗೆ ಸಂಚರಿಸುತ್ತೇನೆ. ಹಿಂದೂ ಕಾರ್ಯಕರ್ತರೊಡನೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ. ಒಬ್ಬನೇ ಒಬ್ಬ ಹಿಂದೂವಿಗೆ ತೊಂದರೆಯಾದರೂ ನಾನು ಸುಮ್ಮನಿರಲ್ಲ ಎಂದು ಎಚ್ಚರಿಸಿದ ಈಶ್ವರಪ್ಪ, ಉಸಿರಿರುವವರೆಗೂ ಹಿಂದೂತ್ವಕ್ಕಾಗಿ ಬದುಕುತ್ತೇನೆ ಎಂದರು.
ನನ್ನನ್ನು ಅಮಿತ್ ಷಾ ಅವರು ದೆಹಲಿಗೆ ಕರೆಯಿಸಿಕೊಂಡರು. ಆದರೆ ಮಾತನಾಡಿಸಲಿಲ್ಲ. ಅವರಿಗೆ ಏನನ್ನಿಸಿತೋ ಗೊತ್ತಿಲ್ಲ. ನನ್ನ ಪ್ರಕಾರ ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಅಂತ್ಯಗೊಳಿಸಬೇಕು ಎನ್ನುವ ಇಚ್ಚೆ ಅವರದ್ದಿದ್ದಿರಬಹುದು. ಅದಕ್ಕೆ ನನ್ನ ಜೊತೆ ಸಂಧಾನ ಮಾಡದೇ ಹಾಗೇ ಕಳಿಸಿಕೊಟ್ಟರು. ನನ್ನ ಸ್ಪರ್ಧೆ ರಾಷ್ಟ್ರ ನಾಯಕರಿಗೆ ಸಮ್ಮಿತಿಯಿದೆ ಎಂದು ನಾನು ಭಾವಿಸಿದ್ದೇನೆ. ಚುನಾವಣೆಯಲ್ಲಿ ನಾನು ಖಂಡಿತ ಗೆಲ್ಲುತ್ತೇನೆ. ಆ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇನೆ ಎಂದರು.
ಯಡಿಯೂರಪ್ಪ ನನ್ನನ್ನು ಪಕ್ಷದಿಂದ ಕಿತ್ತೊಗೆಯಬಹುದು. ಆದರೆ ತವರು ಮನೆ ಬಿಟ್ಟ ಬಳಿಕ ತವರನ್ನು ಮರೆಯಲಾಗುವುದಿಲ್ಲ. ಮತ್ತೆ ಬಿಜೆಪಿಯಲ್ಲಿಯೇ ಸೇರುತ್ತೇನೆ. ಹಿಂದೆ ಅಧಿಕಾರದ ಆಸೆಗಾಗಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪ ಮತ್ತು ಶೋಭಾ ಮತ್ತೆ ಬಿಜೆಪಿ ಸೇರಿದ್ದಾರೆ. ಆದರೆ ನಾನು ಅಧಿಕಾರದ ಆಸೆಗಾಗಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ಬಿಜೆಪಿಯ ಕುಟುಂಬ ರಾಜಕಾರಣವನ್ನು ತೊಳೆದು ಶುದ್ಧಗೊಳಿಸುವುದಕ್ಕಾಗಿ ಹೋರಾಟ ನಡೆಸುತ್ತೇನೆ ಎಂದರು. ಈ ಸಂದರ್ಭ ಹಿಂದೂ ಮುಖಂಡ ಶ್ರೀಧರ ಬಿಜೂರು ಮೊದಲಾದ ಯುವ ಮುಖಂಡರು ಉಪಸ್ಥಿತರಿದ್ದರು.
