ರಾಮಮಂದಿರಕ್ಕೆ ನಾನೂ ಹಣ ನೀಡಿದ್ದೇನೆ : ದೇವರ ಹೆಸರಲ್ಲಿ ರಾಜಕೀಯ ಮಾಡಲ್ಲ : ಜೆ.ಪಿ. ಹೆಗ್ಡೆ
ಎದುರಿನ ಅಭ್ಯರ್ಥಿ ವಿರುದ್ಧ ಟೀಕೆ ಮಾಡಿಲ್ಲ ಮಾಡಲ್ಲ

ಕುಂದಾಪುರ: ರಾಮಮಂದಿರಕ್ಕೆ ನಾನೂ ಹಣ ನೀಡಿದ್ದೇನೆ. ಹಾಗಂತ ನಾನು ಯಾವತ್ತೂ ದೇವರ ಹೆಸರಲ್ಲಿ ರಾಜಕೀಯ ಮಾಡಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಕೋಟೇಶ್ವರದಲ್ಲಿ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು.
ಚುನಾವಣೆ ಪ್ರಕ್ರಿಯೆಗಳು ಈಗಷ್ಟೆ ಶುರುವಾಗಿದೆ. ಅಲ್ಲಲ್ಲಿ ಸಭೆ ನಡೆಸಿ ಕಾರ್ಯಕರ್ತರ ಜೊತೆ ಚರ್ಚಿಸಲಾಗುತ್ತಿದೆ. ಇನ್ನು ಕೆಲವು ದಿನಗಳ ಬಳಿಕ ಮನೆ ಮನೆ ಭೇಟಿ ಯೋಜನೆಯನ್ನು ಕಾರ್ಯಕರ್ತರು ಹಾಗೂ ಆಯಾ ಕ್ಷೇತ್ರಗಳ ನಾಯಕರು ನಡೆಸಲಿದ್ದಾರೆ ಎಂದರು.
ನಾನು ನನ್ನ ರಾಜಕೀಯ ಜೀವನದಲ್ಲಿ ಯಾವತ್ತಿಗೂ ಎದುರಾಳಿ ಅಭ್ಯರ್ಥಿಯನ್ನು ಟೀಕಿಸಿಲ್ಲ. ನಾನು ನನ್ನ ಸಾಧನೆ ಮತ್ತು ಸಾಮರ್ಥ್ಯವನ್ನು ಜನರ ಮುಂದಿಟ್ಟು ಮತ ಯಾಚಿಸುತ್ತೇನೆ. ಈ ಬಾರಿ ಜನ ಕಾಂಗ್ರೆಸ್ ಪಕ್ಷದ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
