ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ : ಒಬ್ಬ ಸಾವು – ಮೂವರು ಗಂಭೀರ
ಡಿವೈಡರ್ ಗೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆಗೆ ಉರುಳಿದ ಟೊಯೋಟೊ ಇನ್ನೋವಾ
ಮುಂಬೈನಿಂದ ಕೇರಳ ದ ಪಾಂಡಿಚೆರಿ ಮಾಯಿಗೆ ಹೋಗುತ್ತಿದ್ದ ಕಾರು
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರ ಪೈಕಿ ಒಬ್ಬ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ನಡೆದಿದೆ.

ಕಾರಿನಲ್ಲಿದ್ದವರನ್ನು ಮುಂಬೈನಲ್ಲಿ ಉದ್ಯಮ ಹೊಂದಿರುವ ಕೇರಳ ರಾಜ್ಯದ ಪಾಂಡಿಚೇರಿ ಮಾಹಿ ಎಂಬಲ್ಲಿನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಕುಂದಾಪುರ – ಉಡುಪಿ ನಡುವಿನ ರಾ. ಹೆ. 66ರಲ್ಲಿ ಕುಂದಾಪುರ ಸಮೀಪದ ಕೆ ಎಸ್ ಆರ್ ಟಿ ಸಿ ಡಿಪೋ ಎದುರುಗಡೆ ಫ್ಲೈ ಓವರ್ ಮೇಲೆ ಚಲಿಸುತ್ತಿದ್ದ ಕಾರು ಏಕಾಏಕೀ ಸರ್ವಿಸ್ ರಸ್ತೆ ಮತ್ತು ಹೆದ್ದಾರಿ ನಡುವಿನ ಡಿವೈಡೆರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಡಿಕ್ಕಿ ಹೊಡೆದ ಕಾರು ಕಬ್ಬಿಣದ ಗ್ರಿಲ್ ಗಳನ್ನು ಮುರಿದು ಸರ್ವಿಸ್ ರಸ್ತೆ ಮೇಲೆ ತಲೆಕೆಳಗಾಗಿ ಬಿದ್ದಿದೆ.

ಸಂಪೂರ್ಣ ನುಚ್ಚು ನೂರಾಗಿರುವ ಕಾರಿನಲ್ಲಿದ್ದ ಮೂವರ ಪೈಕಿ ಮಹಿಳೆ ಸಮೀರಾ (45) ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಸಹಿತ ಪತಿ ಮೋನವರ್ ಟಿ. ಪಿ. (49) ಮತ್ತು ಪುತ್ರ ಸುಹೇಲ್ (19) ಎಂಬ ಇಬ್ಬರನ್ನು ಮಣಿಪಾಲ ಕೆ ಎಂ ಸಿ ಗೆ ಸಾಗಿಸಲಾಗಿದೆ.

ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿ ಹೋಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಸರ್ವಿಸ್ ರಸ್ತೆಯಲ್ಲಿ ಮಗುಚಿ ಬಿದ್ದ ಕಾರಿನಿಂದಾಗಿ ಸಂಚಾರ ಸಮಸ್ಯೆ ಉಂಟಾಗಿದ್ದು ಸ್ಥಳೀಯ ಸಾರ್ವಜನಿಕರು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಟ್ಟರು.
ವೀಡಿಯೋ ವೀಕ್ಷಣೆಗೆ ಇಲ್ಲಿ ಕ್ಲಿಕ್ಕಿಸಿ 👇
https://youtu.be/JD6mctiAXdo?si=g6IWi66LIN2qixSE
