ಬೈಕ್ ಗೆ ಲಾರಿ ಡಿಕ್ಕಿ : ಸವಾರ ಸಾವು

ಕುಂದಾಪುರ: ಚಲಿಸುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ, ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಇಡೂರು ಕುಂಜಾಡಿ ಗ್ರಾಮದ ಜನ್ನಲ್ ಕೊಳ್ತಾ ನಿವಾಸಿ ಆನಂದ ಶೆಟ್ಟಿ ಎಂಬುವರ ಮಗ ಭರತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.

ಕೋಟೇಶ್ವರ ಸಮೀಪದ ಪೇಯಿಂಟಿಂಗ್ ಅಂಗಡಿಯಲ್ಲಿ ಸೇಲ್ಸ್ ಮೆನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭರತ್ ಶೆಟ್ಟಿ ಕೆಲಸದ ನಿಮಿತ್ತ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಬೈಕಿನಲ್ಲಿ ಪ್ರಾಯಣಿಸುತ್ತಿದ್ದರು. ಇದೇ ಸಂದರ್ಭ ಬಾಲ ಮುರುಗನ್ ಎಂಬಾತ ಚಲಾಯಿಸುತ್ತಿದ್ದ ಲಾರಿ ರಸ್ತೆಯ ಬಲಬದಿಯಲ್ಲಿ ಹೋಗುತ್ತಿದ್ದ ವಾಹನವನ್ನು ಎಡಬದಿಯಿಂದ ಓವರ್ ಟೇಕ್ ಮಾಡಿ ಮುಂಬದಿಯಲ್ಲಿ ಹೋಗುತ್ತಿದ್ದ ಭರತ್ ಶೆಟ್ಟಿ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಭರತ್ ಶೆಟ್ಟಿ ಬೈಕ್ ಅಮೇತಬರಸ್ತೆಗೆ ಬಿದ್ದಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಪ್ರಜ್ಞೆ ಕಳೆದು ಕೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಎನ್. ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮಧ್ಯಾಹ್ನ 01-30 ಗಂಟೆಗೆ ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.

ಮೃತ ಭರತ್ ಶೆಟ್ಟಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದು ಪತ್ನಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ. ಕುಂದಾಪುರ ಸಂಚಾರೀ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
