ಕರಾವಳಿ ಭದ್ರತೆಯಲ್ಲಿ ಮೀನುಗಾರರ ಸಹಕಾರ ಅತ್ಯಗತ್ಯ: ಉಡುಪಿ ಎಸ್‌ಪಿ ಹರಿರಾಮ್ ಶಂಕರ್
ಉಡುಪಿ: ದೇಶದ ಯಾವುದೇ ಕಡಲ ತೀರದಲ್ಲಿ ಸ್ಥಳೀಯ ಮೀನುಗಾರರ ಸಹಕಾರವಿದ್ದಾಗ ಮಾತ್ರ ಕರಾವಳಿ ಕಾವಲು ಪೊಲೀಸರಿಗೆ ಸಮುದ್ರ ತೀರ ಹಾಗೂ ಕರಾವಳಿಯ ಆಂತರಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದರು.

ಅವರು ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಅಧೀನದ ಕರಾವಳಿ ಭದ್ರತಾ ತರಬೇತಿ ಸಂಸ್ಥೆ (CoSTI) ವತಿಯಿಂದ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮುದ್ರ ಮಾರ್ಗದ ಮೂಲಕ ನಡೆಯಬಹುದಾದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು, ಅನುಮಾನಾಸ್ಪದ ದೋಣಿಗಳ ಮೇಲೆ ನಿಗಾವಹಿಸುವುದು ಹಾಗೂ ನುಸುಳುಕೋರರು ದೇಶದೊಳಗೆ ಪ್ರವೇಶಿಸದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಕರಾವಳಿ ಕಾವಲು ಪೊಲೀಸ್ ಪಡೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕೆ.ಎಲ್. ಗಣೇಶ್, ಹೆಜಮಾಡಿ ಠಾಣೆ ಸಿಪಿಐ ರತ್ನಕುಮಾರ್, ಮೀಸಲು ಪಡೆಯ ಸಿಪಿಐ ಮೂರ್ತಿ ನಾಯ್ಕ, ಗುಪ್ತ ವಾರ್ತೆ ವಿಭಾಗದ ಸಿಪಿಐ ಸೀತಾರಾಮ ಹಾಗೂ ಮುಖ್ಯ ತರಬೇತುದಾರ ಆರ್.ಜಿ. ಬಿರಾದಾರ ಉಪಸ್ಥಿತರಿದ್ದರು. ಎಂಎಸ್‌ಐ ಶಶಿಧರ ಸ್ವಾಗತಿಸಿದರು. ಎಂಎಸ್‌ಐ ಭಾಸ್ಕರ್ ಶೆಟ್ಟಿಗಾರ್ ವಂದಿಸಿದರು.
ತರಬೇತಿಯಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗಂಗೊಳ್ಳಿ, ಮಲ್ಪೆ, ಹೆಜಮಾಡಿ ಹಾಗೂ ಮಂಗಳೂರು, ಭಟ್ಕಳ, ಕಾರವಾರ, ಬೇಲೆಕೇರಿ, ಕುಮಟಾ ಹಾಗೂ ಹೊನ್ನಾವರ ಕರಾವಳಿ ಕಾವಲು ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
