ಇದು ನರೇಂದ್ರ ಮೋದಿ ಕೊಲ್ಲೂರಿಗೆ ಆಗಮಿಸುವ ಚುನಾವಣೆ – ಗಂಟಿಹೊಳೆ
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಧಾರ್ಮಿಕ ಕ್ಷೇತ್ರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಮೋದಿಯವರನ್ನು ಕೊಲ್ಲೂರಿಗೆ ಕರೆತರುವ ದೃಢಸಂಕಲ್ಪ ಮಾಡಿದ್ದೇನೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮನದಲ್ಲೂ ಮೋದಿ ಬಗ್ಗೆ, ಕೊಲ್ಲೂರಿನ ಬಗ್ಗೆ ವಿಶೇಷ ಭಾವನೆ ಇದೆ. ಮೋದಿಯವರ ಬಗೆಗಿನ ಅಭಿಮಾನ ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಸಂಕಲ್ಪವನ್ನು ಸಾಧಿಸುತ್ತೇವೆ ಎಂಬ ವಿಶ್ವಾಸ ನಮಗಿದೆ. ಬೈಂದೂರಿನಲ್ಲಿ ಒಂದು ಲಕ್ಷ ಲೀಡ್ ಕೊಡಿಸುವ ಜೊತೆಗೆ ನರೇಂದ್ರ ಮೋದಿ ಅವರನ್ನು ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿಧಿಗೆ ಕರೆಸುವ ಸಂಕಲ್ಪವನ್ನು ನಮ್ಮ ಸಂಸದರಾದ ರಾಘವೇಂದ್ರ ಅವರಿಗೆ ತಿಳಿಸಿದ್ದೇವೆ, ಇದು ನಮ್ಮ ಕ್ಷೇತ್ರದ ಮತದಾರರ ಮತ್ತು ಕಾರ್ಯಕರ್ತರ ಸಂಕಲ್ಪವಾಗಿದೆ. ಇದಕ್ಕೆ ನಮ್ಮ ಸಂಸದರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ನಾವು ವಿಶಿಷ್ಟ ರೀತಿಯಲ್ಲಿ ಎದುರಿಸುತ್ತಿದ್ದೇವೆ. ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ 246 ಬೂತ್ ಗಳಿದ್ದು, ಈ ಎಲ್ಲಾ ಬೂತ್‌ಗಳನ್ನು ತಲುಪುವ ನಿಟ್ಟಿನಲ್ಲಿ ಬೂತ್ ಕಡೆಗೆ ಸಮೃದ್ಧ ನಡಿಗೆ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ ಎಂದು ಗಂಟಿಹೊಳೆ ಹೇಳಿದ್ದಾರೆ.
