ಮತಬೇಟೆಗೆ ಮುಂದಾದ ಶಾಸಕ ಗಂಟಿಹೊಳೆ – ಬೂತ್ ಕಡೆಗೆ ಸಮೃದ್ಧ ನಡಿಗೆ ಚಾಲನೆ

ಬೈಂದೂರು: ಪ್ರಮುಖ ರಾಷ್ಟ್ರೀಯ ಪಕ್ಷಗಳ ನಡುವಿನ ಸಮರಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಚುನಾವಣೆಗೆ ಗರಿಷ್ಟ ದಿನಗಳ ಕಾಲಾವಕಾಶಗಳ ನಡುವೆಯೇ ಭಾರತೀಯ ಜನತಾ ಪಕ್ಷದ ನಾಯಕರಿಗೆ ಬೈಂದೂರು ಗೆಲ್ಲುವುದು ಮಾತ್ರವಲ್ಲ ಲಕ್ಷ ಲೀಡ್ ತರುವುದು ಪ್ರತಿಷ್ಟೆಯಾಗಿದೆ. ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಕಾರ್ಯಕರ್ತರ ಸಭೆ ನಡೆಸಿ ಹೊಸ ಸಂಚಲನ, ಚೈತನ್ಯ ತುಂಬಿದ್ದರು. ಇದರ ಮುಂದುವರಿದ ಭಾಗವಾಗಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಬೂತ್ ಕಡೆಗೆ ಸಮೃದ್ಧ ನಡಿಗೆ ವಿಶೇಷ ಕಾರ್ಯಕ್ರಮದ ಮೂಲಕ ಹಳ್ಳಿ ಹಳ್ಳಿಗಳ ಪ್ರತಿ ಮನೆಯನ್ನೂ ತಲುಪುವ ಸಂಕಲ್ಪ ಮಾಡಿದ್ದಾರೆ. ಆ ಮೂಲಕ ಬೂತ್ ನ ಪ್ರತಿ ಮನೆಯ ಎಲ್ಲ ಮತಗಳು ಬಿಜೆಪಿ ಅಭ್ಯರ್ಥಿಗೆ ಬರುವಂತೆ ಮಾಡಬೇಕು, ಅದಕ್ಕಾಗಿ ಮನೆ ಮನೆ ಭೇಟಿ ನೀಡಬೇಕು. ಆ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಬೇಕು ಎಂಬ ಸಂದೇಶವನ್ನು ಬೂತ್ ನಡಿಗೆಯಲ್ಲಿ ಕಾರ್ಯಕರ್ತರಿಗೆ ಮನದಟ್ಟು ಮಾಡುತ್ತಿದ್ದಾರೆ.


ರಾಷ್ಟ್ರೀಯತೆ, ಹಿಂದುತ್ವ ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯ, ಸಂಸದರಾಗಿ ಬಿ.ವೈ.ರಾಘವೇಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯ, ವಿಶ್ವ ನಾಯಕ ನರೇಂದ್ರ ಮೋದಿ ಯವರ ಸಮರ್ಥ ನಾಯಕತ್ವ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಮಂತ್ರವಾಗಿದೆ. ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಬೈಂದೂರಿನಲ್ಲಿ ಲೀಡ್ ಕೊಟ್ಟರೆ ಮಾತ್ರ ರಾಘವೇಂದ್ರ ಸುಲಭವಾಗಿ ಇತಿಹಾಸ ಸೃಷ್ಟಿಸುತ್ತಾರೆ ಎನ್ನುವುದು ಬೈಂದೂರು ಬಿಜೆಪಿ ಲೆಕ್ಕಾಚಾರ. ಅದೇ ಕಾರಣಕ್ಕೆ ಶಾಸಕ ಗುರುರಾಜ್ ಕ್ಷೇತ್ರದ ಪ್ರತಿ ಬೂತ್ ಗೂ ಭೆಟಿ ನೀಡಿ ಖುದ್ದು ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದಾರೆ. ಜೊತೆಗೆ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

ಏಪ್ರಿಲ್ 3ರಂದು ಶಂಕರನಾರಾಯಣದ ಕುಳ್ಳುಂಜೆ ಮಾವಿನಕೂಡ್ಲು ಎಂಬಲ್ಲಿ ಬೂತ್ ಕಡೆಗೆ ಸಮೃದ್ಧ ನಡಿಗೆ ಅಭಿಯಾನ ಚಾಲನೆಗೊಂಡಿತು. ಏ.18ರ ವರೆಗೆ ಕ್ಷೇತ್ರದ ಎಲ್ಲ ಬೂತ್ ಗಳಿಗೂ ಶಾಸಕರು ಸಂಚರಿಸಿ ಕಾರ್ತಕರ್ತರು, ಮುಖಂಡರು, ಹಿತೈಷಿಗಳನ್ನು ಸಂಪರ್ಕ ಮಾಡಲಿದ್ದಾರೆ.
