BlogEconomyEducationElectionEntertainmentFashionHighlightsHuman storiesLifestyleLocal newsOthersTop StoriesTrending

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ, ವಿವಿಧ ಸಂಘಗಳ ಉದ್ಘಾಟನೆ

Aware others:

ಕುಂದಾಪುರ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಸರಿಯಾದ ಮಾಹಿತಿಗಾಗಿ ಮತ್ತು ಶಿಸ್ತು – ಸಂಯಮ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಮತ್ತು ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭವು ಜೂನ್  27ರಂದು ನಡೆಯಿತು.

ಹತ್ತನೇ ತರಗತಿಯ ಕುಮಾರ ಸಂಗಮೇಶ ವ್ಯಾಪಾರಿ ಮತ್ತು ಕುಮಾರಿ ಸಂಶಿತಾ ಶೆಟ್ಟಿ  ಇವರು ವಿದ್ಯಾರ್ಥಿನಾಯಕ ಮತ್ತು ವಿದ್ಯಾರ್ಥಿ ನಾಯಕಿಯರಾಗಿ ಆಯ್ಕೆಗೊಂಡರು.   ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ರಮೇಶ ಎಚ್ ಎಸ್ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಕಲಿಕೆಯು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರಬಾರದು. ಬದುಕಿನಲ್ಲಿ ಸಾಧನೆ ಮಾಡಬೇಕಾದರೆ ಏನೆಲ್ಲ ಬೇಕೋ ಆ ಎಲ್ಲಾ ವಿದ್ಯೆಗಳನ್ನೂ ಕಲಿಯಬೇಕು. ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕಾದರೆ ಮಕ್ಕಳು ತಿಳಿಯಲೇ ಬೇಕಾದ ಎಲ್ಲಾ ವಿಚಾರಗಳನ್ನೂ ಅಭ್ಯಾಸ ಮಾಡಬೇಕು. ಅಂತಹ ವಿದ್ಯೆ ಇಂತಹ ವಸತಿ ಶಾಲೆಗಳಲ್ಲಿ ಸಿಗುತ್ತಿದ್ದು, ಸಮಯ ಹಾಳು ಮಾಡದೇ ಉತ್ತಮ ನಾಯಕತ್ವಾದಿಗುಣಗಳನ್ನು ಬೆಳೆಸಿಕೊಳ್ಳಿ ಎಂದು ಕಿವಿಮಾತುಗಳನ್ನಾಡಿದರು.

ಇನ್ನೊರ್ವ ಮುಖ್ಯ ಅತಿಥಿ ಕುಂದಾಪುರದ ಗ್ರಾಮೀಣ ಪೋಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆದ ಶ್ರೀ ನಿರಂಜನ ಗೌಡ ಬಿ ಎಸ್ ಮಾತನಾಡುತ್ತಾ ಶಾಲಾ ಮಟ್ಟದಿಂದಲೇ ಚುನಾವಣೆಗಳು ನಡೆಯುವುದು ಮಕ್ಕಳಿಗೆ ತಮ್ಮನ್ನು ನಾಯಕರನ್ನಾಗಿ ಗುರುತಿಸಿಕೊಳ್ಳಲು ಮತ್ತು ಚುನಾವಣಾ ಪ್ರಕ್ರಿಯೆಗಳ ಸರಿಯಾದ ಜ್ಞಾನ ಬರಲೂ ಸಹಾಯಕ. ಮಕ್ಕಳಲ್ಲಿ ತಮ್ಮ ಮಿತ್ರನ ಆಯ್ಕೆಯಲ್ಲಿ ಆತನ ಯೋಗ್ಯತೆಯಷ್ಟೇ ಕಾರಣವಾಗುವುದೇ ವಿನಃ ಅವನ ಯಾವುದೇ ಹಿನ್ನೆಲೆಗಳಲ್ಲ. ಹುಲಿಯ ಹಾಲು ಕುಡಿದ ಮರಿ ಹುಲಿಯಂತೆ ಘರ್ಜಿಸುವಂತೆ ಉತ್ತಮ ನಾಯಕನು ಹೇಗಿರಬೇಕೆಂದು ಅರಿತು ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಪ್ರವೃತ್ತಿ ಇಲ್ಲಿಂದಲೇ ಬೆಳೆಯಬೇಕು. ಶಾಲೆಗಳಲ್ಲಿ ನಾಯಕರಾದವರು ದೇಶದ, ರಾಜ್ಯದ ವಿವಿಧ ಮಂತ್ರಿಗಳಾಗಿ ಇಂದು ನಮ್ಮ ಕಣ್ಣಮುಂದಿದ್ದಾರೆ. ಪ್ರಶ್ನಿಸುವ ಸ್ವಭಾವ, ಹೊಸದನ್ನು ಕಟ್ಟುವ ಬಯಕೆ, ಎಲ್ಲರಿಗೂ ಸಹಾಯಕವಾಗುವ ವ್ಯಕ್ತಿತ್ವ ಇಲ್ಲಿಂದಲೇ ಬೆಳೆಸಿಕೊಳ್ಳಬೇಕು ಎಂದು ಪದಗ್ರಹಣಗೈದ ಮಕ್ಕಳಿಗೆ ಶುಭಾಂಶಸನೆಗೈಯ್ಯುತ್ತಾ ಮಾರ್ಗದರ್ಶನವಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು, ಪ್ರಾಂಶುಪಾಲ ಶರಣ ಕುಮಾರ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ವಿದ್ಯಾರ್ಥಿನಿ ಅಮೃತಾ ಎಸ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಸಮರ್ಥ ಎಸ್.ಪಿ ಸ್ವಾಗತಿಸಿದರೆ, ಕುಮಾರಿ ಅದಿತಿ ಧನ್ಯವಾದವನ್ನು ಅರ್ಪಿಸಿದರು. ಶಿಕ್ಷಕರಾದ ಗಣೇಶ ದೇವಾಡಿಗರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಸಚಿನ್ ಎಸ್  ಅವರು ವಿವಿಧ ಸಂಘಗಳ ಮತ್ತು ವಿದ್ಯಾರ್ಥಿ ನಾಯಕರುಗಳ ಪಟ್ಟಿಯನ್ನು ವಾಚಿಸಿದರು. ಈ ಸಂದರ್ಭ ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಉಪಪ್ರಾಂಶುಪಾಲ ರಾಮ ದೇವಾಡಿಗ ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  


Aware others:

Leave a Reply

Your email address will not be published. Required fields are marked *

error: Content is protected !!