ಕುಂದಾಪುರ: ಎಸ್.ಜನಾರ್ದನ ಮರವಂತೆ ಅವರಿಗೆ ಶ್ರದ್ದಾಂಜಲಿ, ನುಡಿನಮನ


ಕುಂದಾಪುರ: ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅತ್ಯಂತ ಅರ್ಥವತ್ತಾಗಿ ಕೆಲಸ ಮಾಡಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಎಸ್.ಜನಾರ್ದನ್ ಮರವಂತೆ ಅವರು ಒಬ್ಬರು. ಮರವಂತೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ರಾಜ್ಯ, ರಾಷ್ಟ್ರಕ್ಕೆ ಒಂದು ಮಾದರಿ ಗ್ರಾಮ ಪಂಚಾಯತ್ ಆಗಿ ಮುಂದಿಟ್ಟವರು. ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ಶಕ್ತಿಯಾಗಿದ್ದ ಜನಾರ್ದನ ಮರವಂತೆ ಅವರ ನಿಧನ ಸಮಾಜಕ್ಕಾದ ದೊಡ್ಡ ನಷ್ಟ. ಅವರ ಚಿಂತನೆಗಳು, ನಿಲುವು, ಯೋಜನೆಗಳು ಸದಾ ನೆನಪಿನಲ್ಲಿ ಉಳಿಯುವಂತೆ ಕಾರ್ಯಯೋಜನೆಯೊಂದನ್ನು ರೂಪಿಸೋಣ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ರಿ., ಜನಪ್ರತಿನಿಧಿ ಪ್ರಕಾಶನ ಕುಂದಾಪುರ, ಸದ್ಭಾವನಾ ವೇದಿಕೆ ರಿ., ಕುಂದಾಪುರ, ನಮ್ಮ ಭೂಮಿ ಹಟ್ಟಿಯಂಗಡಿ ಇವರ ಆಶ್ರಯದಲ್ಲಿ ನಡೆದ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ ಅವರಿಗೆ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.

ಪಂಚಾಯತ್ ರಾಜ್ ತಜ್ಞ, ಹಿರಿಯ ವಕೀಲ ಟಿ.ಬಿ ಶೆಟ್ಟಿ ಮಾತನಾಡಿ, ಪಂಚಾಯತ್ ವ್ಯವಸ್ಥೆಯ ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳ ಪಂಚಾಯತ್ ರಾಜ್ ಕಾಯಿದೆಯನ್ನು ಅಧ್ಯಯನ ಮಾಡಿ, ಆಳವಾದ ಅನುಭವ ಹೊಂದಿರುವ ವ್ಯಕ್ತಿ ಎಸ್.ಜನಾರ್ದನ್ ಮರವಂತೆ ಆಗಿದ್ದರು. ಅವರಲ್ಲಿರುವ ಅನುಭವ ಯಾವ ಅಧಿಕಾರಿಗೂ ಇಲ್ಲ. ಅಪಾರವಾದ ಜ್ಞಾನಶಕ್ತಿಯನ್ನು ಹೊಂದಿದ್ದರು. ರಮೇಶ ಕುಮಾರ್ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.


ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಪಂಚಾಯತ್ ಮಟ್ಟದಲ್ಲಿ ಸಮಗ್ರ ಅಭಿವೃದ್ಧಿಗೆ ಸರ್ಕಾರದ ದನ ಸಹಾಯಗಳ ಜೊತೆಗೆ ಖಾಸಗೀ ಕಂಪೆನಿಗಳ ಸಿ.ಎಸ್.ಆರ್ ಫಂಡ್ ಗಳನ್ನು ಪರಿಚಯಿಸಿದ ಮೊದಲ ವ್ಯಕ್ತಿ ಎಸ್. ಜನಾರ್ದನ ಮರವಂತೆ. ಅವರ ಜನಾಧಿಕಾರ ಕೃತಿ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯ ಮಾರ್ಗದರ್ಶಿಯಾಗಿ ನಿಂತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.

ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಜನಾರ್ದನ ಮೇಸ್ಟ್ರು ಸಾಧನಾತ್ಮಕ ಚಿಂತನೆಯ ಹರಿಕಾರರಾಗಿ ಸಮಾಜಕ್ಕೆ ಸ್ಪಂದಿಸುವ ಸಹಕಾರ ಮನೋಭಾವದ ಶ್ರೇಷ್ಠ ವ್ಯಕ್ತಿ ಅವರಾಗಿದ್ದರು ಎಂದರು. ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಅಗಲಿದ ಎಸ್.ಜನಾರ್ದನ್ ಮರವಂತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಪತ್ರಕರ್ತ ಶಶಿಧರ ಹೆಮ್ಮಾಡಿ, ಸದ್ಭಾವನಾ ವೇದಿಕೆಯ ಯಾಕೂಬ್ ಖಾದರ್ ಗುಲ್ವಾಡಿ, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಕಾರ್ಮಿಕ ಮುಖಂಡ ಎಚ್.ನರಸಿಂಹ, ಹಿರಿಯ ಲೇಖಕಿ ಡಾ.ಪಾರ್ವತಿ ಜಿ.ಐತಾಳ್, ಸಹಕಾರಿ ಧುರೀಣ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪಂಚಾಯತ್ ರಾಜ್ ತಜ್ಞ ವಿಲ್‌ಪ್ರೇಡ್ ಡಿಸೋಜ, ಪ್ರಶಾಂತ್ ತೋಳಾರ್, ಸಚ್ಚಿದಾನಂದ ಎಂ.ಎಲ್., ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ನಮ್ಮ ಭೂಮಿ ಸಂಸ್ಥೆಯ ಸುರೇಶ, ಪ್ರಾಧ್ಯಾಪಕ ರಾಮಾಂಜಿ, ಮೋಹನಚಂದ್ರ ಉಪ್ಪುಂದ, ಜತೀಂದ್ರ ಮರವಂತೆ ನುಡಿನಮನ ಸಲ್ಲಿಸಿದರು. ಜನಪ್ರತಿನಿಧಿ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.
