ಆನಂದ್ ಸಿ ಕುಂದರ್ ಸಮಾಜದ ಆಸ್ತಿ- ಸಂಸದ ಕೋಟ ಶ್ರೀನಿವಾಸ ಪೂಜಾರಿ : ಗೀತಾನಂದ ಫೌಂಡೇಶನ್‌ನ ವತಿಯಿಂದ ಆನಂದೋತ್ಸವ ಕಾರ್ಯಕ್ರಮ | 52 ಶಾಲೆಗಳ 6500 ಸಾವಿರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ, ಸಸಿ, ಪ್ರತಿಭಾ ಪುರಸ್ಕಾರ,
ಕೋಟ: ಇಲ್ಲಿನ ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್ ವತಿಯಿಂದ ಮಣೂರು-ಪಡುಕರೆಯ ಕೆ. ಸಿ. ಕುಂದರ್ ಸ್ಮರಣಾರ್ಥ ಆನಂದೋತ್ಸವ ಕಾರ್ಯಕ್ರಮ ಜೂ. 06ರ ಶನಿವಾರ ಮಣೂರು ಪಡುಕರೆ ಗೀತಾನಂದ ವೇದಿಕೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಿ ಶುಭ ಹಾರೈಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಬುಕ್ ಹಸ್ತಾಂತರಿಸಿ ಮಾತನಾಡಿ ಆನಂದ್ ಸಿ ಕುಂದರ್ ಈ ಸಮಾಜದ ಆಸ್ತಿಯಾಗಿ ಕರಾವಳಿ ಕಡಲ ತಟವನ್ನು ಶಿಕ್ಷಣ ಕಾಶಿಯಾಗಿಸಿದ್ದಾರೆ,ತನ್ನ ದುಡಿಮೆಯ ಹಣದಲ್ಲಿ ಸಮಾಜಕ್ಕಾಗಿ ಧಾರೆ ಎರೆಯುವ ಕುಂದರ್ ರವರ ಸಾಮಾಜಿಕ ಬದ್ಧತೆಯನ್ನು ಸಭೆಯಲ್ಲಿ ಕೊಂಡಾಡಿದರಲ್ಲದೆ ಪ್ರಸ್ತುತ ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಗಳಿಗೆ ಜೀವ ತುಂಬಿ ಪಡುಕರೆ ಎಂಬ ಗ್ರಾಮೀಣ ಭಾಗದ ಶಾಲೆಯನ್ನು ರಾಜ್ಯದಲ್ಲೆ ಮಾದರಿಯಾಗಿಸಿದ ಆನಂದ್ ಸಿ ಕುಂದರ್ ಬಡವರ ಕಣ್ಣಿರೊರೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಗೀತಾನಂದದ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿ ಮಾಜಿ ಸಚಿವ ಕೆ.ಜಯ್ರಕಾಶ್ ಹೆಗ್ಡೆ ಮಕ್ಕಳಲ್ಲಿ ನಾಗರೀಕತೆಯ ಬೆಳೆಯಬೇಕಾದರೆ ತಂದೆತಾಯಿAದರು ಮತ್ತು ಶಿಕ್ಷಕರ ಪಾತ್ರ ಅಷ್ಟೆ ಬಹುಮುಖ್ಯವಾದದ್ದು ದೇಶ ಅಭಿವೃದ್ಧಿಯಾಗಬೇಕಾದರೆ ಯಾರೇ ಒಬ್ಬರಿಂದ ಸಾಧ್ಯವಿಲ್ಲ. ಬದಲಾಗಿ ಪ್ರತಿಯೊಬ್ಬರ ಪರಿಶ್ರಮದಿಂದ ಸಾಧ್ಯ ಎಂಬವುದನ್ನು ಸಭೆಯ ಮುಂದಿಟ್ಟು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಬೇಕಾದರೆ ಮನೆ ಹಾಗೂ ಶಾಲೆ ಪ್ರಮುಖ ಪಾತ್ರ ವಹಿಸುತ್ತದೆ. ಕಸ ಎಸೆಯಿವ ಮನಸ್ಥಿತಿಯನ್ನು ಖಂಡಿಸಿದ ಅವರು ಪರಿಸರದ ಬಗ್ಗೆ ಜಾಗೃತರಾಗುವುದು ಒಳಿತು ಎಂದು ಮಕ್ಕಳಿಗೆ ಪರಿಸರ ಪಾಠ ಮಾಡಿದರು.

ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ. ಕೆ. ಕೃಷ್ಣಕಾಂಚನ್ ಆನಂದ್ ಸಿ ಕುಂದರ್ ಸಹಸ್ರ ಗಿಡ ನೀಡುವ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಗಿಡಗಳನ್ನು ಸ್ಥಳೀಯ ಸಂಘಸಂಸ್ಥೆಗಳಿಗೆ ಹಸ್ತಾಂತರಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗೋವೆನ್ ಫ್ರೆಶ್ ಮೇರಿನ್ ಪಾಲುದಾರ ಮಲ್ಪೆ ಆನಂದ್ ಪಿ ಸುವರ್ಣ ಕೋಟ ಮಣೂರು ಪಡುಕರೆ ಪಿಯು ಕಾಲೇಜಿಗೆ ವಾಹನದ ಕೀ ಅನ್ನು ಹಸ್ತಾಂತರಿಸಿದರು. ಆನಂದೋತ್ಸವದಲ್ಲಿ ಒಟ್ಟು 52 ಶಾಲೆಗಳ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ಸಾಂಕೇತಿಕವಾಗಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ವಿದ್ಯಾರ್ಥಿವೇತನ ಮತ್ತು ಸಮವಸ್ತ್ರ, ಪರಿಸರದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಸಮವಸ್ತç ವಿತರಣೆ ಗಣ್ಯರ ಸಮ್ಮುಖದಲ್ಲಿ ಜರಗಿತು.
ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಶಾಲಾ ಮಕ್ಕಳಿಗೆ ಸಮವಸ್ತ್ರ ಹಸ್ತಾಂತರಿಸಿದರು. ಮಣೂರು ಪಡುಕರೆ ಶೈಕ್ಷಣಿಕ ವಲಯದಲ್ಲಿ ಸಾಧನೆಗೈದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ (ಡಿಸ್ಟಿಂಕ್ಷನ್) ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ ಮಣೂರು ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮೈತ್ರಿ ಹಾಗೂ ಲಿಖಿತ ಇವರುಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಲಾಯಿತು.ರಾಷ್ಟ್ರೀಯ ವಿದ್ಯಾರ್ಥಿವೇತನ ಪಡೆದ ಸಾಧಕ ವಿದ್ಯಾರ್ಥಿ ಛಾಯಾ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲೆಯ ಗಯಣಾತ್ಮಕ ಫಲಿತಾಂಶಕ್ಲೆ ಕಾರಣಿಭೂತರಾದ ಕೋಟ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲಾ ಶಿಕ್ಷಕ ವೃಂದ ,ಪಿಯು ಕಾಲೇಜಿನ ಶಿಕ್ಷಕ ವೃಂದದವರನ್ನು ಸನ್ಮಾನಿಸಲಾಯಿತು. ಅಲ್ಲದೆ ಶಾಲಾ ವಾಹನ ಚಾಲಕರನ್ನು ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಸಾಧಕ ಶಿಕ್ಷಕಿಯರಾದ ನಾಗರತ್ನ, ಲಕ್ಷ್ಮೀ ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಗೀತಾನಂದ ಫೌಂಡೇಶನ್ 5 ಲಕ್ಷ ರೂಪಾಯಿಗಳ ದೇಣಿಗೆಯನ್ನು ಜಿಲ್ಲಾಸ್ಪತ್ರೆಯ ಸರ್ಜನ್ ಅಶೋಕ್ ಇವರಿಗೆ ಹಸ್ತಾಂತರಿಸಿದರು.
ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕೂಸ ತಾಂಡೇಲರ ಮನೆಯಲ್ಲಿ ಪ್ರಾರಂಭಗೊಂಡ ಈ ಶಾಲೆ ಗ್ರಾಮವಿಕಾಸ ಕೇಂದ್ರದ ಮೂಲಕ ಇಂದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ.ಈ ಶಿಕ್ಷಣ ಸಂಸ್ಥೆಗೆ ಗೀತಾನಂದ ಫೌಂಡೇಶನ್ ಟೊಂಕಕಟ್ಟಿ ಶ್ರಮಿಸುತ್ತಿದ್ದು ಮುಂದೆಯೂ ಕೂಡಾ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಫೋಷಿಸಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಖ್ಯಾತ ಮನೋವೈದ್ಯ ಡಾ. ಪ್ರಕಾಶ್ ತೋಳಾರ್, ಮೊಗವೀರ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಕೊರವಾಡಿ,ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಬಾರಿಕೇರೆ , ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ್, ಪಿಯು ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಜಿ ಕೆ., ಪ್ರಾಥಮಿಕ ವಿಭಾಗದ ವಿಜಯ ಅಲ್ತೂರು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರೌಢವಿಭಾಗದ ನಾಗರಾಜ್,ಪ್ರಾಥಮಿಕ ವಿಭಾಗದ ವಿನಯ್ ಕುಮಾರ್, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ ಎಚ್ ಕುಂದರ್, ಗೀತಾನಂದ ಫೌಂಡೇಶನ್ ನಿರ್ದೇಶಕರಾದ ಗೀತಾ ಎ ಕುಂದರ್, ವೈಷ್ಣವಿ ಆರ್ ಕುಂದರ್, ದಿವ್ಯಲಕ್ಷ್ಮೀ ಪಿ ಕುಂದರ್ ಉಪಸ್ಥಿತರಿದ್ದರು. ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ಬಿ. ಗಾಂವ್ಕರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಜನತಾ ಸಂಸ್ಥೆಯ ಸಿಬ್ಬಂದಿ ಮಮತಾ ನಿರೂಪಿಸಿ, ಗೀತಾನಂದ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ವಂದಿಸಿದರು. ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ಸಹಕರಿಸಿದರು.
