BlogCrime newsGovernmentHighlightsHuman storiesLifestyleLocal newsOthersState newsTop StoriesTrending

ಕುಂದಾಪುರ: ಮೃತರ ಹೆಸರಲ್ಲಿ ನಕಲಿ ಪಾನ್ ಕಾರ್ಡ್ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಲೂಟಿಗೆ ಯತ್ನ – ಆರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು

Aware others:

​ಕುಂದಾಪುರ: ಸತ್ತವರ ಹೆಸರಿನಲ್ಲಿ ನಕಲಿ ದಾಖಲೆಗಳು ಹಾಗೂ ಪಾನ್ ಕಾರ್ಡ್‌ಗಳನ್ನು ತಯಾರಿಸಿ, ಪೋರ್ಝರಿ ಸಹಿ ಹಾಕಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ನೋಂದಣಿ ಮಾಡಿಕೊಂಡಿರುವ ಪ್ರಕರಣ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುನೀಲ್ ದೇವ ಪೈ (57) ಎಂಬುವರು ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

​ಮುಂಬೈನ ದಹಿಸರ್ (ಪಶ್ಚಿಮ)ದಲ್ಲಿ ವಾಸವಿರುವ ಮೂಲ ಕುಂದಾಪುರದ ನಿವಾಸಿ ಸುನೀಲ್ ದೇವ ಪೈ ಅವರ ಅಜ್ಜ ಕೃಷ್ಣರಾಯ ಪೈ ಅವರು 1968 ರಲ್ಲಿ ಕುಂದಾಪುರ ಕಸಬಾ ಗ್ರಾಮದ ಸರ್ವೆ ನಂಬರ್ 115-2ಎ, 115/2ಸಿ, 111/13, 111/9ಎ ಮತ್ತು 111/9ಸಿ ವ್ಯಾಪ್ತಿಯ ವಿವಿಧ ಆಸ್ತಿಗಳನ್ನು ಕ್ರಯಪತ್ರದ ಮೂಲಕ ಖರೀದಿಸಿದ್ದರು. 1978 ರಲ್ಲಿ ಕೃಷ್ಣರಾಯ ಪೈ ಮೃತಪಟ್ಟ ಬಳಿಕ, ಈ ಆಸ್ತಿಗಳು 2015-16 ರ ಮ್ಯುಟೇಶನ್ ಆದೇಶದಂತೆ ಸುನೀಲ್ ಅವರ ತಂದೆ ಯು. ದೇವರಾಯ ಪೈ ಹಾಗೂ ಇತರೆ ವಾರಸುದಾರರ ಹೆಸರಿಗೆ ವರ್ಗಾವಣೆಗೊಂಡಿದ್ದವು. ಬಳಿಕ ದೇವರಾಯ ಪೈ ಅವರು 2014 ರ ನವೆಂಬರ್ 10 ರಂದು ಮುಂಬೈನಲ್ಲಿ ನಿಧನರಾಗಿದ್ದರು.

​ಪ್ರಕರಣದ ಮೊದಲನೇ ಆರೋಪಿ ರಾಮಚಂದ್ರ ಕಾಮತ್ ಎಂಬಾತ ಗಣಪ, ರಾಧಾಕೃಷ್ಣ ಸಾರಂಗ, ಸಂಜೀವ, ಲಕ್ಷಣ ಶೆಟ್ಟಿ ಮತ್ತು ನಾಗೇಶ್ ಕಾಮತ್ ರೊಂದಿಗೆ ಸಂಚು ರೂಪಿಸಿ ದೇವರಾಯ ಪೈ ಅವರ ಹೆಸರಿನಲ್ಲಿ ನಕಲಿ ಪಾನ್ ಕಾರ್ಡ್ ಸೃಷ್ಟಿಸಿದ್ದಲ್ಲದೆ, ಸುಮಾರು 25 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ಪ್ರಖ್ಯಾತ ವಕೀಲರಾದ ಕೆ. ಆನಂದ ಯಾನೆ ಕೆ. ಆನಂದರಾವ್ ಅವರ ಹೆಸರಿನಲ್ಲಿಯೂ  ನಕಲಿ ಪಾನ್ ಕಾರ್ಡ್ ಸೃಷ್ಟಿಸಿ, ನಕಲಿ ನಂಬರ್‌ಗಳನ್ನು ನಮೂದಿಸಿದ್ದಾರೆ.

ಈ ದಾಖಲೆಗಳನ್ನು ಬಳಸಿಕೊಂಡು ಆರೋಪಿಗಳು 2025 ರ ಡಿಸೆಂಬರ್ 5 ರಂದು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ದಸ್ತಾವೇಜನ್ನು ಸಿದ್ಧಪಡಿಸಿ ಮರುದಿನವೇ ಕುಂದಾಪುರ ಉಪನೋಂದಣಾಧಿಕಾರಿಗಳ ಕಚೇರಿಗೆ ನೊಂದಣಿಗೆ ಹಾಜರುಪಡಿಸಿದ್ದಾನೆ. ಮೃತ ದೇವರಾಯ ಪೈ ಎಂದು ಹೇಳಿಕೊಂಡು ರಾಮಚಂದ್ರ ಕಾಮತ್ ಖುದ್ದಾಗಿ ಹಾಜರಾಗಿದ್ದರೆ, ಮೃತ ವಕೀಲ ಆನಂದರಾವ್ ಅವರ ಹೆಸರಿನಲ್ಲಿ ಬೇರೊಬ್ಬ ಅಪರಿಚಿತ ವ್ಯಕ್ತಿಯನ್ನು ನಿಲ್ಲಿಸಿ, ಇಬ್ಬರ ಫೋಟೋ ಹಾಗೂ ಸಹಿಗಳನ್ನು ಫೋರ್ಜರಿ (ನಕಲು) ಮಾಡಲಾಗಿದೆ. ಈ ವಂಚನೆಯ ಜಿಪಿಎ ಪತ್ರಕ್ಕೆ ಮತ್ತೊಬ್ಬ ಆರೋಪಿ ಲಕ್ಷಣ ಶೆಟ್ಟಿ ಬರಹಗಾರನಾಗಿ ಸಹಿ ಮಾಡಿದ್ದು, ಕೊನೆಯಲ್ಲಿ ಎರಡನೇ ಆರೋಪಿ ದಸ್ತಾವೇಜು ಸಂಖ್ಯೆ 471/2025-26 ರಂತೆ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಕಾನೂನುಬಾಹಿರವಾಗಿ ನೊಂದಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!