BlogAgricultureEconomyEducationElectionGovernmentHighlightsHuman storiesLifestyleLocal newsNatureOthersPoliticsState newsTop StoriesTrending

ವರಾಹಿ ಮೂಲ ಯೋಜನೆ ಹಳ್ಳ ಹಿಡಿಯಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ – ಕೆ. ವಿಕಾಸ್ ಹೆಗ್ಡೆ

Aware others:

ಕುಂದಾಪುರ: ವರಾಹಿ ಯೋಜನೆ ಹಳ್ಳ ಹಿಡಿಯಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಮುಖ್ಯ ಕಾರಣ ಹೊರತು ಯಾವುದೇ ಖಾಸಗಿ ವಿದ್ಯುತ್ ಉತ್ಪಾದಕರಾಗಲಿ ಇಲ್ಲಾ ರಾಜಕೀಯ ಹಿತಾಸಕ್ತಿಗಳಾಗಲಿ ಕಾರಣವಲ್ಲ ಎಂದು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ. ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿಕೆ ನೀಡಿದ್ದು, ವಾರಾಹಿ ಯೋಜನೆ ವಿಳಂಬದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವ ಸಂಸದ ಬಿ. ವೈ. ರಾಘವೇಂದ್ರರವರ ಹೇಳಿಕೆ ಸತ್ಯಕ್ಕೆ ದೂರವಾದ ಮಾತು ಎಂದು ತಿರುಗೇಟು ನೀಡಿದ್ದಾರೆ.

1979 ರಲ್ಲಿ ವರಾಹಿ ಮೂಲ ಯೋಜನೆಯಾದ  ಬಲ ದಂಡೆ, ಎಡ ದಂಡೆ ಮತ್ತು ಏತ ನೀರಾವರಿ ಕಾಲುವೆ ಮುಖಾಂತರ ಕುಂದಾಪುರ ತಾಲೂಕು ಮತ್ತು ಬ್ರಹ್ಮಾವರದ ತನಕ ಸುಮಾರು ಹದಿನೆಂಟು ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಹಾಯಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಶಂಖುಸ್ಥಾಪನೆ ಮಾಡಿದ್ದರು. ಆಗ ಅದರ ಅಂದಾಜು ಮೊತ್ತ ಬರೀ ಒಂಬತ್ತು ಕೋಟಿ ಆಗಿತ್ತು ಎಂದಿರುವ ಅವರು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದು ಅದರ ಬಜೆಟ್ ಒಂದು ಸಾವಿರ ಕೋಟಿಗೆ ತಲುಪಿದೆ ಎಂದು ಹೇಳಿದ್ದಾರೆ.

ಇಂದು ಕುಡಿಯುವ ನೀರು ಹಾಗೂ ಕೃಷಿ ಉಪಯೋಗಿ ನೀರನ್ನು ಪೂರೈಸಲು ವರಾಹಿ ನದಿ ನೀರನ್ನೇ ಬಳಸುತ್ತಿರುವ ಕಾರಣ ವರಾಹಿ ನದಿಯಲ್ಲಿ ವರ್ಷ ಪೂರ್ತಿ ಗಣನೀಯ ಪ್ರಮಾಣದಲ್ಲಿ ನೀರು ಹರಿಯುವ ಅವಶ್ಯಕತೆಯಿದೆ. ಹೋರಿಯಬ್ಬೆಯಲ್ಲಿನ ಸುಮಾರು 1100 ಕ್ಯೂಸೆಕ್ಸ್ ನೀರು ಸಾಮರ್ಥ್ಯದ ಡೈವರ್ಶನ್ ವಿಯರ್ ಇರುವುದು ಕೇವಲ ವಾರಾಹಿ ಮೂಲ ಯೋಜನೆಯ ಕಾಲುವೆಗಳಿಗೆ ಬಿಟ್ಟರೆ ಇತರೇ ಯೋಜನೆಗಳಿಗಲ್ಲ. ವರಾಹಿ ನದಿ ನೀರನ್ನು ಬಳಸುವ ಕುಂದಾಪುರ ಪುರಸಭೆ ಹಾಗೂ ಸುಮಾರು ಹನ್ನೆರಡು ಗ್ರಾಮ ಪಂಚಾಯತ್ ಗಳಿಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಅತೀವವಾಗಿ ಕಾಡಿದೆ. ಇನ್ನು ಬೇರೆ ಬೇರೆ ಯೋಜನೆ ಹೆಸರಿನಲ್ಲಿ ವರಾಹಿ ಕಾಲುವೆ ಅಥವಾ ಡೈವರ್ಶನ್ ವಿಯರ್ ನಿಂದ ನೀರೆತ್ತಿದರೆ ವರಾಹಿ ನದಿ ಬರಡಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿರುವ ವಿಕಾಸ್,  ಸಿದ್ದಾಪುರ ಏತ ನೀರಾವರಿ ಹಾಗೂ ಮುಂದೆ ಕೈಗೊಳ್ಳುವ ಯಾವುದೇ ಹೊಸ ಹೊಸ ಯೋಜನೆಗಳನ್ನು ವರಾಹಿ ನದಿ ಪಾತ್ರದಲ್ಲೇ ಜಾಕ್ ವೆಲ್ ನಿರ್ಮಾಣ ಮಾಡಿ ವರಾಹಿ ನದಿಯಿಂದಲೇ ನೇರವಾಗಿ ನೀರನ್ನು ಎತ್ತಬೇಕು ಹೊರತು ವರಾಹಿ ಕಾಲುವೆ ಅಥವಾ ಹೋರಿಯಬ್ಬೆಯ ವರಾಹಿ ಡೈವರ್ಶನ್ ವಿಯರ್ ನಿಂದ ನೀರೆತ್ತಬಾರದು ಎಂದು ಆಗ್ರಹಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!