ಶಿಕ್ಷಣದಿಂದ ಮಾತ್ರ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ: ಅಕ್ಷರದಕ್ಕರೆ-2026 ಕಾರ್ಯಕ್ರಮದಲ್ಲಿ ಆನಂದ ಸಿ. ಕುಂದರ್
ಕೋಟ: ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲ ಆಧಾರವಾಗಿದ್ದು, ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ಶಾಶ್ವತ ಸಂಪತ್ತಾಗಿದ್ದು, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಜಾತಿ-ಮತ ಭೇದ ಮರೆತು ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರಕುವಂತೆ ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

ಭಾನುವಾರ ಕೋಟ ಸಿ ಎ ಬ್ಯಾಂಕ್ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹೋಬಳಿ ಘಟಕ ಕೋಟ ಇವರ ಆಶ್ರಯದಲ್ಲಿ ನಡೆದ ‘ಅಕ್ಷರದಕ್ಕರೆ-2026’ ಕಾರ್ಯಕ್ರಮದಲ್ಲಿ ಉಚಿತ ನೋಟ್‌ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಭನಮನಗೈಯಲಾಯಿತು. ಬಳಿಕ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಕುಂದಾಪುರದ ಪ್ರೀತಮ್ ಪೂಜಾರಿ ಹಾಗೂ ಸಂಸತ್ ಭವನದಲ್ಲಿ ಅಂಬೇಡ್ಕರ್ ಕುರಿತು ಭಾಷಣಗೈದ ಮಹಾಲಕ್ಷ್ಮಿ ಸಿ.ಜಿ ಇವರುಗಳಿಗೆ ಅಕ್ಷರದಕ್ಕರೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಮಂಜುನಾಥ್, ಬಿಎಸ್ ಎನ್ ಎಲ್ ಅಧಿಕಾರಿ ಮಣೂರಿನ ಪ್ರಭಾಕರ್ ಇವರಿಗೆ ಸಮುದಾಯ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ವಿದ್ಯರ್ಥಿಗಳಿಗೆ ಸಾಂಕೇತಿಕವಾಗಿ ನೋಟ್ ಬುಕ್ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಅಕ್ಷರದಕ್ಕರೆ ಮಹತ್ವ ತಿಳಿಸಲಾಯಿತು.
ದಸಂಸ ಕೋಟ ಹೋಬಳಿಯ ಸಂಚಾಲಕ ನಾಗರಾಜ್ ಪಡುಕರೆ ಅಧ್ಯಕ್ಷತೆವಹಿಸಿದ್ದರು.ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ ರಾಜು ಬೆಟ್ಟಿನಮನೆ, ಜಿಲ್ಲಾ ಸಮಿತಿಯ ಸದಸ್ಯ ಶ್ರೀನಿವಾಸ ವಡ್ಡರ್ಸೆ, ತಾಲೂಕು ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಹಿರಿಯ ಮುಖಂಡ ಐತ ಕಾರ್ಕಡ, ದಸಂಸ ಮಹಿಳಾ ಒಕ್ಕೂಟದ ಗೀತಾ ಸುರೇಶ್, ಗಣಪತಿ ಜೂನಿಯರ್ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ರತ್ನಾಕರ ಗುಂಡ್ಮಿ, ಉಪನ್ಯಾಸಕ ಸಂಜೀವ ಸಿ ಗುಂಡ್ಮಿ, ಕೋಟ ವಿವೇಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರೇಮಾನಂದ ಬಾರ್ಕೂರು ಉಪಸ್ಥಿತರಿದ್ದರು.
ದಸಂಸ ತಾಲೂಕು ಪ್ರಧಾನ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಭಾಕರ್ ಮಣೂರು ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು. ರವಿ ಬನ್ನಾಡಿ ಸಹಕರಿಸಿದರು. ಬಳಿಕ ಅಘೋರೇಶ್ವರ ಮೇಲೋಡಿಸ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
