ಅಂಪಾರು: ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಕುಂದಾಪುರ: ದೃಷ್ಟಿ ಪ್ರದಾನ ಯೋಜನೆ 2026-27 ರ ಅಂಗವಾಗಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆ ಕುಂದಾಪುರ, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು, ರೋಟರಿ ಕ್ಲಬ್ ಕುಂದಾಪುರ ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರಿನಲ್ಲಿ ದಿನಾಂಕ 19 ಮೇ 2026 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಮನೋಜ್ ಭಟ್ ಮಾತನಾಡಿ, ಸಮಾಜದ ಆರೋಗ್ಯವೇ ನಿಜವಾದ ಸಂಪತ್ತು. ಕಣ್ಣುಗಳು ದೇವರ ಅಮೂಲ್ಯ ಕೊಡುಗೆ. ಅವುಗಳ ಆರೈಕೆ ಪ್ರತಿಯೊಬ್ಬರ ಜವಾಬ್ದಾರಿ. ನಿಯಮಿತ ನೇತ್ರ ತಪಾಸಣೆ, ಸಮತೋಲನ ಆಹಾರ ಮತ್ತು ಸರಿಯಾದ ಆರೋಗ್ಯಕರ ಅಭ್ಯಾಸಗಳ ಇಂದಿನ ಅಗತ್ಯ ಎಂದರು.
ಶಿರೂರು ಮುದ್ದುಮನೆ ನೇತ್ರ ಚಿಕಿತ್ಸೆ ಆಸ್ಪತ್ರೆಯ ಆಡಳಿತಾಧಿಕಾರಿ ಶಂಕರ ಶೆಟ್ಟಿ ಮಾತನಾಡಿ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಸೇವಾ ಧ್ಯೇಯಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ತಲುಪಿಸುವ ಉದ್ದೇಶದಿಂದ ಟ್ರಸ್ಟ್ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅದರ ಸೇವಾ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಎಂದರು.

ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ದೊರಕಬೇಕು ಎಂಬುದು ನಮ್ಮ ಕನಸು. ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದತ್ತ ಟ್ರಸ್ಟ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಕುಂದಾಪುರ ಸರಕಾರಿ ಆಸ್ಪತ್ರೆಯ ಕೌನ್ಸಿಲರ್ ವೀಣಾ ಆರೋಗ್ಯಕರ ಜೀವನಶೈಲಿಯ ಅಗತ್ಯತೆಯನ್ನು ತಿಳಿಸಿದರು. ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಯ ಮಹತ್ವವನ್ನು ತಿಳಿಸಿ, ಸಾರ್ವಜನಿಕರು ಇಂತಹ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ರೋಟೇರಿಯನ್ ನಾಗರಾಜ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಕಾರ್ಯದರ್ಶಿ ನವೀನ್ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸರ್ವೋದಯ ಪೂಜಾರಿ, ನಿಯೋಜಿತ ಅಧ್ಯಕ್ಷರಾದ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು. ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಖಜಾಂಚಿ ಮತ್ತು ಶಾಲೆಯ ಶೈಕ್ಷಣಿಕ ಸಂಚಾಲಕ ಸುಭಾಷ್ಚಂದ್ರ ಶೆಟ್ಟಿ ಕೊಡ್ಲಾಡಿ ಸ್ವಾಗತಿಸಿದರು. ಆಡಳಿತಾಧಿಕಾರಿ ಚೈತ್ರ ಯಡಿಯಾಳ ನಿರೂಪಿಸಿ ವಂದಿಸಿದರು.
