ಅಂಪಾರು: ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ತರಬೇತಿ ಉದ್ಘಾಟನೆ
ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಒಳನೋಟದ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಒಂದು ವಾರಗಳ ಅವಧಿಯ ಗಾಂಧಾರಿ ವಿದ್ಯೆ ಹಾಗೂ ಮಿಡ್ ಬ್ರೈನ್ ಆ್ಯಕ್ಟಿವೇಷನ್ ತರಬೇತಿ ಕಾರ್ಯಾಗಾರವು ಅಂಪಾರಿನ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ). ಅಂಪಾರು ವತಿಯಿಂದ ರೋಟರಿ ಕ್ಲಬ್ ಕುಂದಾಪುರದ ಸಹಕಾರದೊಂದಿಗೆ ಚಿಗುರು ಮಿಡ್ ಬ್ರೈನ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿರ್ದೇಶಕ ಅಂಪಾರು ಅರುಣ್ ಕುಮಾರ್ ಶೆಟ್ಟಿ, “ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಹೊರತೆಗೆದು, ಅವರ ಚಿಂತನಾ ಶಕ್ತಿಯನ್ನು ವೃದ್ಧಿಸುವಲ್ಲಿ ಇಂತಹ ತರಬೇತಿಗಳು ಮಹತ್ವದ ಪಾತ್ರವಹಿಸುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇಂತಹ ಅಪೂರ್ವ ಅವಕಾಶ ದೊರಕುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೇ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೂ ಅವಕಾಶ ಕಲ್ಪಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಶಿಕ್ಷಣ ಹಾಗೂ ನೂತನ ಕಲಿಕಾ ವಿಧಾನಗಳನ್ನು ತಲುಪಿಸುವುದು ಟ್ರಸ್ಟ್‌ನ ಪ್ರಮುಖ ಧ್ಯೇಯವಾಗಿದೆ ಎಂದರು.
ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷ, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಖಜಾಂಚಿ ಹಾಗೂ ಶಾಲೆಯ ಶೈಕ್ಷಣಿಕ ಸಂಚಾಲಕ ಸುಭಾಷ್‌ಚಂದ್ರ ಶೆಟ್ಟಿ ಕೊಡ್ಲಾಡಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೂ ಶಾಲಾ ಶಿಕ್ಷಣದೊಂದಿಗೆ ಮಿಡ್ ಬ್ರೈನ್ ಆ್ಯಕ್ಟಿವೇಷನ್‌ನಂತಹಾ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಚಿಗುರು ಮಿಡ್ ಬ್ರೈನ್ ಆ್ಯಕ್ಟಿವೇಷನ್ ಅಕಾಡೆಮಿಯ ಸಂಸ್ಥಾಪಕ ಹಾಗೂ ತರಬೇತುದಾರ ಮಹೇಶ್ ಕಾರ್ಯಾಗಾರದ ಉದ್ದೇಶ, ಅದರ ಪ್ರಯೋಜನಗಳು ಹಾಗೂ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಇದು ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು. ಆಡಳಿತಾಧಿಕಾರಿ ಚೈತ್ರ ಯಡಿಯಾಳ ಸ್ವಾಗತಿಸಿದರು. ಶಿಕ್ಷಕಿ ಸರೋಜಾ ನಿರೂಪಿಸಿದರು. ವಿದ್ಯಾರ್ಥಿನಿ ಧನ್ವಿ ಪ್ರಾರ್ಥಿಸಿದರು. ಪೋಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
