ಕುಂದಾಪುರ: ಮೊದಲ ಮಳೆಗೆ ಸಿಡಿಲು ಬಡಿದು ಪಂಜಾಬ್ ಮೂಲದ ಐ.ಆರ್.ಬಿ ಕಾರ್ಮಿಕ ಸಾವು
ಕುಂದಾಪುರ: ಬಹಳಷ್ಟು ನಿರೀಕ್ಷೆಯ ಬಳಿಕ ಮೇ 14ರಂದು ಕುಂದಾಪುರದಲ್ಲಿ ಸಂಜೆ ದಿಡೀರ್ ಗಾಳಿ, ಸಿಡಿಲು ಮಿಂಚು ಹಾಗೂ ಮಳೆ ಸುರಿದಿದ್ದು, ಮೊದಲ ಮಳೆಗೇ ಸಿಡಿಲು ಬಡಿದು ಪಂಜಾಬ್ ಮೂಲದ ಐ.ಆರ್.ಬಿ. ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ತ್ರಾಸಿ ಸಮೀಪದ ಮುಳ್ಳಿಕಟ್ಟೆ ಎಂಬಲ್ಲಿಯ ಅರಾಟೆ ಸೇತುವೆ ಮೇಲೆ ನಡೆದಿದೆ.

ಸಿಡಿಲು ಬಡಿದು ಸಾವನ್ನಪ್ಪಿದ ಕಾರ್ಮಿಕನನ್ನು ಪಂಜಾಬ್ ರಾಜ್ಯದ ನಿವಾಸಿ ಅಶಿತೋಷ್ ಸಿಂಗ್ (35) ಎಂದು ಗುರುತಿಸಲಾಗಿದೆ. ಅಶಿತೋಷ್ ಸಮೀಪವೇ ಕೆಲಸ ಮಾಡುತ್ತಿದ್ದ ನವಜ್ಯೋತ್ ಸಿಂಗ್ (37) ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಶಿತೋಷ್ ಹಾಗೂ ನವಜ್ಯೋತ್ ಸಿಂಗ್ ಇಬ್ಬರು ಅರಾಟೆ ಸೇತುವೆ ದುರಸ್ತಿ ಕಾಮಗಾರಿಗೆ ಸಂಬಂಧಿಸಿ ಸ್ಥಳ ವೀಕ್ಷಣೆಗಾಗಿ ಬಂದಿದ್ದರು ಎನ್ನಲಾಗಿದೆ. ಗುರುವಾರ ಸಂಜೆ 7 ಗಂಟೆ ಸಮಯಕ್ಕೆ ಸೇತುವೆ ಬಳಿ ನಿಂತಿದ್ದಾಗ ದಿಢೀರ್ ಸಿಡಿಲು ಬಡಿದಿದೆ. ಘಟನೆಯ ಪರಿಣಾಮ ಅಶೊತೋಷ್ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅಶಿತೋಷ್ ಮೃತದೇಹವನ್ನು ಕುಂದಾಪುರದ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
