ಎಪ್ರಿಲ್ 16ರಿಂದ 20 ಅರೆಹೊಳೆ ದಿಬ್ಬಣ, ರಂಗಶಾಲೆ ಲೋಕಾರ್ಪಣೆ, ಸಾಂಸ್ಕೃತಿಕ ಸಡಗರ – ಆಮಂತ್ರಣ ಪತ್ರ ಬಿಡುಗಡೆ
ಕುಂದಾಪುರ: ಅರೆಹೊಳೆ ಪ್ರತಿಷ್ಠಾನ ಮತ್ತು ನಂದಗೋಕುಲ ಸಹಯೋಗದಲ್ಲಿ ಎಪ್ರಿಲ್ 16ರಿಂದ 20ರ ವರೆಗೆ ಅರೆಹೊಳೆ ರೆಪರ್ಟರಿ ಹಾಗೂ ಥಿಯೇಟರ್ ಸ್ಕೂಲ್ ನಲ್ಲಿ ಐದು ದಿನಗಳ ಅರೆಹೊಳೆ ದಿಬ್ಬಣ ಸಾಂಸ್ಕೃತಿಕ ಕಾರ್ಯಕ್ರಮಗಳ ಸಡಗರ, ರಂಗಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಅರೆಹೊಳೆ ಪ್ರತಿಷ್ಟಾನದ ಅಧ್ಯಕ್ಷ ಸದಾಶಿವ ರಾವ್ ಅರೆಹೊಳೆ ಹೇಳಿದರು.

ಅವರು ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿದರು.ಎಪ್ರಿಲ್ 16ರಂದು ಬೆಳಿಗ್ಗೆ ಐದು ದಿನಗಳ ರಂಗ ಶಿಬಿರ ರಂಗಿನಾಟ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 2.30ಕ್ಕೆ ಆಕಳಬೈಲು ಶ್ರೀ ಮಹಾಗಣಪತಿ ವಾದ್ಯವೃಂದ ಸ್ಯಾಕ್ಸೋಫೋನ್ ವಾದ್ಯಗೋಷ್ಟಿ, ಸಂಜೆ 5.30ರಿಂದ ಅರೆಹೊಳೆ ಪ್ರತಿಷ್ಟಾನದ ನಂದಗೋಕುಲ ಕಲಾವಿದರಿಂದ ಶ್ವೇತಾ ಅರೆಹೊಳೆ ನಿರ್ದೇಶನದ ಧರ್ಮ ಸಂಸ್ಥಾಪನಾರ್ಥಾಯ ಎನ್ನುವ ನೃತ್ಯ ರೂಪಕ ಹಾಗೂ ರಾತ್ರಿ 8 ಗಂಟೆಯಿಂದ ಶ್ರೀ ಕ್ಷೇತ್ರ ಹನುಮಗಿರಿ ಇವರಿಂದ ಸಾಕೇತ ಸಾಮ್ರಾಜ್ಞಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಎಪ್ರಿಲ್ 17ರಂದು ಮಧ್ಯಾಹ್ನ 2.30ರಿಂದ ಸಿದ್ಧಾಪುರ ಯಕ್ಷನುಡಿಸಿರಿ ಬಳಗದಿಂದ ಸುದರ್ಶನ ವಿಜಯ ಯಕ್ಷಗಾನ ತಾಳಮದ್ದಳೆ, ಸಂಜೆ 7.30ಕ್ಕೆ ಡಾ. ಶ್ರೀಪಾದಭಟ್ ನಿರ್ದೇಶನದ ಕಣಿವೆಯ ಹಾಡು ನಾಟಕ ಪ್ರದರ್ಶನ ನಡೆಯಲಿದೆ. ಎಪ್ರಿಲ್ 18ರಂದು ಮಧ್ಯಾಹ್ನ 2.30ಕ್ಕೆಅರೆಹೊಳೆ ನೃತ್ಯ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ ವರ್ಷಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ಅರೆಹೊಳೆ ದಿಬ್ಬಣ ಪುರಸ್ಕಾರ ಕಾರ್ಯಕ್ರಮದಲ್ಲಿ ಮಂಜು ದೇವಾಡಿಗ ಆಕಳಬೈಲು, ಮಹಾಬಲೇಶ್ವರ ರೈ ಕಾಸರಗೋಡು ಹಾಗೂ ತುಂಗಾ ದೇವಾಡಿಗ ಚಿಕ್ತಾಡಿ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಗುವುದು. ಸಂಜೆ 7.15ಕ್ಕೆ ಆಯಣ ಡಾನ್ಸ್ ಕಂಪೆನಿ ಪ್ರಸ್ತುತಿಯ ಧ್ರುವ ನೃತ್ಯ ರೂಪಕ ನಡೆಯಲಿದೆ.

ಎಪ್ರಿಲ್ 19ರಂದು ಮಧ್ಯಾಹ್ನ 2.30ಕ್ಕೆ ಅರೆ ಶಾಸ್ತ್ರೀಯ ಸಮೂಹ ನೃತ್ಯ ಸ್ಪರ್ಧೇ ನೂಪುರಂಗಳ್ ನಡೆಯಲಿದೆ. ಸಂಜೆ 6.45ಕ್ಕೆ ಮಂಗಳೂರಿನ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನ ನೃತ್ಯ ಅಕಾಡೆಮಿ ಮಂಗಳೂರು ಪ್ರಸ್ತುತಿಪಡಿಸುವ ಏಕವ್ಯಕ್ತಿ ಪ್ರದರ್ಶನ ಜ್ವಾಲಾಮುಖಿ ಅಂಬೆ ಪ್ರದರ್ಶನಗೊಳ್ಳಲಿದೆ. ಎಪ್ರಿಲ್ 20ರಂದು ಮಧ್ಯಾಹ್ನ 2.30ಕ್ಕೆ ರಾಜ್ ಗುರು ಹೊಸಕೋಟೆ ಮತ್ತು ನಯನ ಸೂಡ ನೇತೃತ್ವದ ಆದಿಮೂಲ ತಂಡ ಹಾಗೂ ರಂಗಿನಾಟ ಶಿಬಿರಾರ್ಥಿಗಳಿಂದ ರಂಗಗೀತೆಗಳು, ಸಂಜೆ 7.30ಕ್ಕೆ ನೃತ್ಯ ನಿಕೇತನ ಕೊಡವೂರು ಇವರಿಂದ ನಾರಸಿಂಹ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ ಎಂದು ಸದಾಶಿವರಾವ್ ಅರೆಹೊಳೆ ತಿಳಿಸಿದರು.

ಇದೇ ಸಂದರ್ಭ ಶ್ರೀ ಕ್ಷೇತ್ರ ಅರೆಹೊಳೆಯ ಪ್ರದಾನ ಅರ್ಚಕ ರಾಘವೇಂದ್ರ ಕಾರಂತ ಅವರು ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಸಿ ಮಾತನಾಡಿ, ಅರೆಹೊಳೆ ಪ್ರತಿಷ್ಠಾನವು ಕರಾವಳಿಯ ಸಂಸ್ಕೃತಿಯ ಜೊತೆಗೆ ಅರೆಹೊಳೆಯ ಹೆಸರನ್ನೂ ಜಗದಗಲ ಪಸರಿಸುತ್ತಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಅರೆಹೊಳೆ ಪ್ರತಿಷ್ಠಾನದ ಎಲ್ಲಾ ಕಾರ್ಯಗಳೂ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ನಂದಗೋಕುಲ ಮಂಗಳೂರು ಇದರ ನಿರ್ದೇಶಕಿ ಶ್ವೇತಾ ಅರೆಹೊಳೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರಂಗ ಶಾಲೆ ಆರಂಭಿಸುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗ ಪೂರ್ಣಾವಧಿಯ ರಂಗ ಶಾಲೆ ಆರಂಭಗೊಂಡಿದೆ. ಕಲಾಭಿಮಾನಿಗಳು ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಚಿಕ್ತಾಡಿ ಗೆಳೆಯರ ಬಳಗದ ಮುಖ್ಯಸ್ಥ ಉಮೇಶ ಮೊಗವೀರ ಉಪಸ್ಥಿತರಿದ್ದರು. ಬ್ಲ್ಯಾಕ್ ಎಂಡ್ ವೈಟ್ ಸಂಸ್ಥೆಯ ಮುಖ್ಯಸ್ಥ ಉದಯ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
