ಕುಂದಾಪುರ: ಬೈಕ್ ಗಳ ಮುಖಾಮುಖಿ ಡಿಕ್ಕಿ – ಕುಂದಾಪುರ ಗಾಣಿಗ ಸಂಘದ ಮಾಜೀ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು

ಕುಂದಾಪುರ: ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಂದಾಪುರ ತಾಲೂಕು ಗಾಣಿಗ ಸಮಾಜ ಸಂಘಟನೆಯ ಮಾಜೀ ಅಧ್ಯಕ್ಷ, ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನದ ಸಕ್ರಿಯ ಕಾರ್ಯಕರ್ತ, ನಮ್ಮಭೂಮಿ ಸಂಸ್ಥೆಯ ಶ್ರೀನಿವಾಸ ಗಾಣಿಗ (68) ಅವರು ಸಾವನ್ನಪ್ಪಿದ ಘಟನೆ ಕುಂದಾಪುರ ಸಮೀಪದ ತಲ್ಲೂರು – ಪ್ರವಾಸಿ ನಡುವೆ ನಡೆದಿದೆ.

ಮಂಗಳವಾರ ರಾತ್ರಿ ಸಮಾರು ಎಂಟು ಗಂಟೆಯ ವೇಳೆಗೆ ಅಪಘಾತ ನಡೆದಿದ್ದು, ಶ್ರೀನಿವಾಸ ಗಾಣಿಗ ಅವರು ಕುಂದಾಪುರದಿಂದ ಪಂಚಾಯತ್ ರಾಜ್ ಹಕ್ಕೊತ್ತಾಯ ಆಂದೋಲನದ ಸಭಾ ಕಾರ್ಯಕ್ರಮವೊಂದನ್ನು ಮುಗಿಸಿ ಬೈಕಿನಲ್ಲಿ ತಮ್ಮ ಮನೆಯಾದ ಕಟ್ ಬೆಲ್ತೂರು ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ಸಂದರ್ಭ ತಲ್ಲೂರಿನಿಂದ ರಾಂಗ್ ಸೈಡಿನಲ್ಲಿ ಪ್ರವಾಸಿಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಶ್ರೀನಿವಾಸ ಗಾಣಿಗ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು ಹದಿನೈದು ವರ್ಷಗಳಿಂದ ನಮ್ಮ ಭೂಮಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ ಗಾಣಿಗರು ಪತ್ನಿ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷೆ ಲಲಿತಾ ಗಾಣಿಗ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
