BlogCrime newsEconomyGovernmentHighlightsHuman storiesLifestyleLocal newsPoliticsProtestState newsTop StoriesTrendingWomen Care

ಹೊಸಮನೆ ಪಕ್ಕ ಬೋರ್‌ವೆಲ್ ಕೊರೆತ: ದಲಿತ ಕುಟುಂಬದ ಮನೆಗೆ ಹಾನಿ  – ಸ್ಥಳೀಯರಿಂದ ಪ್ರತಿಭಟನೆ

Aware others:

ಕುಂದಾಪುರ : ಹದಿನೈದು ದಿನಗಳ ಹಿಂದಷ್ಟೇ ಒಕ್ಕಲಾದ ದಲಿತ ಕುಟುಂಬವೊಂದರ ಮನೆ ಸಮೀಪ ಜಿಲ್ಲಾ ಪಂಚಾಯತ್ ಬೋರ್‌ವೆಲ್ ತೋಡಿದ ಪರಿಣಾಮ ಮನೆಗೆ ಹಾನಿಯಾಗಿದ್ದು, ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ತ್ರಾಸಿ ಗ್ರಾಮದ ಮೊವಾಡಿ ಅಂಬೇಡ್ಕರ್ ಕಾಲೋನಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮೊವಾಡಿ ಅಂಬೇಡ್ಕರ್ ಕಾಲೋನಿ ನಿವಾಸಿ ಆಶಾ ನಾಗರಾಜ ಎಂಬುವರು ಇತ್ತೀಚೆಗೆ ಹೊಸ ಮನೆಯೊಂದನ್ನು ಕಟ್ಟಿದ್ದರು. ಇದೇ ಮನೆಯಿಂದ ಸ್ವಲ್ಪ ದೂರದಲ್ಲಿ ಸರಕಾರಿ ಸ್ಥಳದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಬೋರ್‌ವೆಲ್ ತೋಡಲಾಗುತ್ತಿದ್ದು, ಇದರಿಂದ ಮನೆಯ ಗೋಡೆ ಮತ್ತಿತರ ಸ್ಥಳಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಯಾರ ಗಮನಕ್ಕೂ ಇಲ್ಲದೆ ಹೊಸ ಮನೆಯ ಸಮೀಪದಲ್ಲೇ ಬೋರ್‌ವೆಲ್ ತೋಡುತ್ತಿರುವುದರಿಂದ ಇತ್ತೀಚಿಗಷ್ಟೇ ನಿರ್ಮಾಣವಾಗಿರುವ ಹೊಸ ಮನೆಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಯಿತು.

ನಾಗರಾಜ್ ಮತ್ತು ಆಶಾ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು, ಮಕ್ಕಳು ಶಾಲೆಗೆ ಹೋಗಿದ್ದರು. ಬೋರ್‌ವೆಲ್ ತೆಗೆಯಲು ಆರಂಭಿಸಿದ ಸಮಯದಲ್ಲಿ ಯಾರೂ ಇರಲಿಲ್ಲ. ನಾಗರಾಜ್ ಮತ್ತು ಆಶಾ ಕೆಲಸದಿಂದ ಮನೆಗೆ ಬಂದಾಗ ಬೋರ್‌ವೆಲ್ ತೋಡುತ್ತಿರುವುದು ಮತ್ತು ಇದರಿಂದ ಮನೆಯ ಮೇಲೆ ಆದ ಪರಿಣಾಮಗಳನ್ನು ಗಮನಿಸಿ, ಸ್ಥಳೀಯ ಗ್ರಾಪಂ.ಗೆ ವಿಷಯ ತಿಳಿಸಿ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಸಂಬಂದಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೋರ್‌ವೆಲ್ ತೋಡಿರುವುದರಿಂದ ಆದ ಹಾನಿಯನ್ನು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ ನಾಗರಾಜ್, ಬೋರ್‌ವೆಲ್ ತೆಗೆಯುವ ಸಂದರ್ಭ ಸಮೀಪದಲ್ಲಿರುವ ಮನೆಯನ್ನು ಗಮನಿಸದೆ, ಸಾಲ ಮಾಡಿ 15 ದಿನಗಳ ಹಿಂದಷ್ಟೇ ನಿರ್ಮಿಸಿದ್ದ ಮನೆಯ ಗೃಹ ಪ್ರವೇಶವಾಗಿದ್ದು ಈ ಮನೆಯಲ್ಲಿ ಬಿರುಕು ಮೂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಹೊಣೆಗಾರರು ಯಾರು?. ದಲಿತರಾಗಿದ್ದಕ್ಕೆ ಇಂತಹ ಅನ್ಯಾಯ ಮಾಡಿದ್ದಾರೋ ಎಂದು ತಿಳಿಯುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಬೋರ್ವೆಲ್ ಕೊರೆಸಲು ಸ್ಥಳೀಯ ಗ್ರಾ‌.ಪಂ. ಯಾವುದೇ ಪರವಾನಿಗೆ ನೀಡಿಲ್ಲ. ದಲಿತನ ಮನೆಗೆ ಹಾನಿಮಾಡಿ ಕುಡಿಯುವ ನೀರಿನ ಸೌಲಭ್ಯ ಕೊಡುವ ಉದ್ದೇಶವೇ ಅಥವಾ ಅನ್ಯಾಯದ ವಿರುದ್ಧ ಧ್ವನಿಯಾಗುವ ದಲಿತರನ್ನು ಹತ್ತಿಕ್ಕುವ ಹುನ್ನಾರವೇ ತಿಳಿಯುತ್ತಿಲ್ಲ ಎಂದು ರಾಘವೇಂದ್ರ ಹೇಳಿದರು.

ಮನೆಯೊಡತಿ ಆಶಾ ನಾಗರಾಜ್ ಮಾತನಾಡಿ, ಜಿಲ್ಲಾಧಿಕಾರಿಗಳು ಅಥವಾ ಜಿಪಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ತನಕ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಮಗಾದ ಅನ್ಯಾಯದ ಬಗ್ಗೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸುತ್ತೇವೆ. ನಾವು ಕಷ್ಟಪಟ್ಟು‌ ಮನೆ ಕಟ್ಟಿಸಿದ್ದೇವೆ. ಅದರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದು ದಲಿತರಿಗಾದ ಅನ್ಯಾಯ ಎಂದು ಕಣ್ಣೀರು ಹಾಕಿದರು.

ಇಲ್ಲಿ ನಡೆದ ವಿಚಾರದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಬುಧವಾರ ಸ್ಥಳಕ್ಕೆ ಆಗಮಿಸಲಿದ್ದಾರೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿ ನಿರ್ಮಾಣಕ್ಕೆ ಒಂದಷ್ಟು ಜಾಗ ಗುರುತಿಸಿದ್ದು ಇದರಲ್ಲಿ ನೀರು ಸಿಗುವ ಬಗ್ಗೆ ತಂತ್ರಜ್ಞರು ಸ್ಥಳ ಗುರುತಿಸಿದ್ದರು. ಹೀಗಾಗಿ ಇಲ್ಲಿ ಕೊಳವೆ ಬಾವಿ ಕೊರೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿಪಂ ಎಇಇ ನಾಗಸೇನ, ಗ್ರಾಪಂ ಪ್ರಭಾರ ಪಿಡಿಒ ಶೋಭಾ, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಪವನ್ ನಾಯಕ್ ಮೊದಲಾದವರು ಹಾನಿಯನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮನೆಯವರ ಮನವೊಲಿಸುವ ಪ್ರಯತ್ನ ನಡೆಸಿದರೂ ರಾತ್ರಿ 9 ಗಂಟೆಯವರೆಗೆ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಹೊರತು ನಾವು ಇಲ್ಲಿಂದ ಕದಲುವುದಿಲ್ಲ ಎಂದು ಮನೆಮಂದಿ ಪಟ್ಟುಹಿಡಿದರು. ಬೋರ್‌ವೆಲ್ ಕೊರೆಯಲು ಬಂದ ವಾಹನವನ್ನು ಕೂಡ ಸ್ಥಳದಿಂದ ತೆರಳಲು ಬಿಡದೆ ಪ್ರತಿಭಟಿಸಿದರು.

ಈ ಸಂಬಂಧ ಜಿಪಂ ಎಇಇ ನಾಗಶಯನ, ಗ್ರಾಪಂ ಪ್ರಭಾರ ಪಿಡಿಒ ಶೋಭಾ, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಪವನ್ ನಾಯಕ್ ಅವರು ಆಶಾ ಮತ್ತು ನಾಗರಾಜ್ ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಬುಧವಾರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ಭರವಸೆ ನೀಡಿದರು.

ತ್ರಾಸಿ ಗ್ರಾಮಪಂಚಾಯತಿ ವ್ಯಾಪ್ತಿಯ ಮೋವಾಡಿಯ 112 ಎ ಸರ್ವೇ ನಂಬರ್‌ನಲ್ಲಿ ಸುಮಾರು 6 ಎಕರೆ ಜಾಗವನ್ನು ದಲಿತರ ಮನೆ ನಿವೇಶನಕ್ಕಾಗಿ ಮೀಸಲಿಟ್ಟು 107 ನಿವೇಶನಗಳನ್ನು ಮಾಡಲಾಗಿದೆ. ಇದರಲ್ಲಿ 3-4 ಸೆಂಟ್ಸ್‌ನಂತೆ 28 ನಿವೇಶನಗಳನ್ನು ಹಂಚಲಾಗಿದೆ. ಅದರಲ್ಲಿ ಆಶಾ-ನಾಗರಾಜ್ ದಂಪತಿಯ ನಿವೇಶನವೂ ಒಂದಾಗಿದ್ದು  ಎಪ್ರಿಲ್ 6 ರಂದು ಗೃಹಪ್ರವೇಶ ನಡೆದಿತ್ತು. ಇದೀಗ ಸಾಲದ ಹೊರೆ ಒಂದುಕಡೆಯಾದರೆ ಹೊಸಮನೆ ಹಾನಿಯಾಗಿರವ ಚಿಂತೆ ಮತ್ತೊಂದು ಕಡೆಯಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!