ಕುಂದಾಪುರ: ಮನೆ ಗಾರೆಕೆಲಸದ ಸಂದರ್ಭ ಕಬ್ಬಿಣದ ಏಣಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಕಟ್ಟಡ ಕಾರ್ಮಿಕ ಸಾವು – ರಾಜಿಯಲ್ಲಿ ಇತ್ಯರ್ಥ!

ಕುಂದಾಪುರ: ಮನೆಯೊಂದರ ಗಾರೆಕೆಲಸ ಮಾಡುತ್ತಿದ್ದ ವೇಳೆ ಕಬ್ಬಿಣದ ಏಣಿಯನ್ನು ಮತ್ತೊಂದೆಡೆ ಸ್ಥಳಾಂತರಿಸುವಾಗ ಮನೆ ಹಿಂಭಾಗದ ಸಮೀಪವೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಏಣಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಕುಂದಾಪುರದ ಕಡ್ಗಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಮುತ್ತ-ಗಂಗಾ ದಂಪತಿಗಳ ಪುತ್ರ ಶಿವರಾಜ್ (35) ಮೃತ ದುರ್ದೈವಿ.

ಘಟನೆ ವಿವರ: ಕುಂದಾಪುರ ಹೊರವಲಯದ ಸಂತೆ ಮಾರ್ಕೆಟ್ ಸಮೀಪದ ಕಡ್ಗಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎನ್ನುವವರ ಹೊಸಮನೆಗೆ ಗಾರೆ ಮಾಡಲು ಸೋಮವಾರ ಶಿವರಾಜ್ ಹಾಗೂ ಇತರರು ಬಂದಿದ್ದು ತನ್ನ ಜೊತೆ ಕೆಲಸ ಮಾಡುವ ಇನ್ನಿಬ್ಬರು ಕೆಲಸಗಾರರೊಂದಿಗೆ ಕಬ್ಬಿಣದ ಏಣಿಯನ್ನು ಎತ್ತಿ ಬೇರೆ ಕಡೆಗೆ ಹೊತ್ತೊಯ್ಯುವಾಗ ಆಕಸ್ಮಿಕವಾಗಿ ಏಣಿಯು ಆಯತಪ್ಪಿ ಹತ್ತಿರದಲ್ಲಿಯೇ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದೆ. ಪರಿಣಾಮವಾಗಿ ವಿದ್ಯುತ್ ಆಘಾತಕ್ಕೊಳಗಾದ ಶಿವರಾಜ್ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಶಿವರಾಜ್ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಪ್ರವೀಣ್ ಖಾರ್ವಿ ಅವರು ಕಡ್ಗಿ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆಯೇ ಮನೆ ನಿರ್ಮಾಣಕ್ಕೆ ತೊಡಗಿದ್ದು ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಳಿಸಿದ್ದು, ಇತ್ತೀಚೆಗಷ್ಟೆ ಕಾಮಗಾರಿ ಪುನರಾರಂಭಿಸಿದ್ದರು. ಹೊಳೆ ಸಮೀಪದಲ್ಲಿಯೇ ಮನೆ ನಿರ್ಮಾಣವಾಗುತ್ತಿದ್ದು, ಮೊದಲು ಈ ಹೈ ಟೆನ್ಷನ್ ವಿದ್ಯುತ್ ಲೈನ್ ಮನೆಯ ಮೇಲ್ಭಾಗದಲ್ಲಿಯೇ ಹಾದುಹೋಗುತ್ತಿತ್ತು. ಮನೆ ನಿರ್ಮಾಣದ ಕಾರಣಕ್ಕೆ ಪ್ರವೀಣ್ ಅವರು ಸ್ವಂತ ಖರ್ಚಿನಲ್ಲಿ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು ಪಕ್ಕಕ್ಕೆ ಸರಿಸಿದ್ದರು. ಅಲ್ಲದೆ ಹೊಸ ವಿದ್ಯುತ್ ಮಾರ್ಗ ಮನೆಗೆ ಸಮೀಪದಲ್ಲಿಯೇ ಹಾದುಹೋಗಿದ್ದು ಸೋಮವಾರ ಕಾರ್ಮಿಕನನ್ನು ಬಲಿತೆಗೆದುಕೊಂಡಿದೆ.

ಅವಿವಾಹಿತನಾಗಿರುವ ಶಿವರಾಜ್ ಕಳೆದ 15 ವರ್ಷಗಳಿಂದ ಗಾರೆ ಕೆಲಸ ಮಾಡುತ್ತಿದ್ದರು. ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಮೂಲತಃ ಬಸ್ರೂರು ಸಮೀಪದ ಮಾರ್ಗೋಳಿಯವರಾಗಿದ್ದು ಬಡಾಗುಡ್ಡಿ ಎಂಬಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕಾರ್ಮಿಕ ಶಿವರಾಜನ ದುರಂತ ಅಂತ್ಯಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ರಾಜಿ ಮಾಡಿಕೊಂಡಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂಬುದಾಗಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

