ಉಡುಪಿ: ಸಂತ್ರಸ್ಥರ ಪರ ಜೈಲಿಗೆ ಹೋಗಲೂ ಸಿದ್ಧ – ಶಾಸಕ ಯಶ್ಪಾಲ್ ವಿರುದ್ಧ ಕೋಟ ನಾಗೇಂದ್ರ ಪುತ್ರನ್ ಆಕ್ರೋಶ
ಕೋಟ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ತಮ್ಮ ನೇತೃತ್ವದ ಮಹಾಲಕ್ಷ್ಮೀ ಸೊಸೈಟಿಯಲ್ಲಿ ಮಾಡಿದ ಹಗರಣಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಹೋರಾಟಗಾರರ ವಿರುದ್ಧ ಸುಳ್ಳು ಕಂಪ್ಲೈಟ್ ದಾಖಲು ಮಾಡಾಗುತ್ತದೆ. ಆದರೆ ನಾನು ಸಂತ್ರಸ್ಥರ ಪರವಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೆಂದ್ರ ಪುತ್ರನ್ ಆಕ್ರೋಶ ಹೊರಹಾಕಿದ್ದಾರೆ.

ಶಾಸಕರಿಗೆ ತಾಕತ್ತು ಇದ್ದರೆ ಮಹಾಲಕ್ಷ್ಮಿ ವಿಚಾರದಲ್ಲಿ ಮುಖಾಮುಖಿ ಚರ್ಚೆಗೆ ಬರಲಿ. ಅದು ಬಿಟ್ಟು ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸಿ ಅಧಿಕಾರದ ದರ್ಪ ತೋರಿಸದೇ, ಸಂತ್ರಸ್ಥ ಬಡವರನ್ನು ಕಾನೂನಿನನ ಕುಣಿಕೆ ಸಿಲುಕಿಸಿ, ನಾನೆ ಸತ್ಯವಂತ ಎಂದು ಹೇಳಿಕೊಂಡು ತಿರುಗುವುದನ್ನು ನಿಲ್ಲಿಸಲಿ ಎಂದು ಎಚ್ಚರಿಸಿದ್ದಾರೆ.
ನಮ್ಮ ಹೋರಾಟದಲ್ಲಿ ನಿಯತ್ತಿದೆ. 2 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. 64ರ ತನಿಖೆ ಕೂಡ ತನಿಖೆ ಹಂತದಲ್ಲಿದೆ. ಆದರೆ ಉಡುಪಿ ಶಾಸಕರು ಎಲ್ಲ ತನಿಖೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿ, ಉಡುಪಿ ಕ್ಷೇತ್ರದ ಮತದಾರರು ಆಗಿರುವ ಸಂತ್ರಸ್ತರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ನಮ್ಮ ವಿರುದ್ಧ ಎಷ್ಟೇ ಪ್ರಕರಣಗಳು ದಾಖಲಾದರೂ ಮಹಾಲಕ್ಷ್ಮಿ ವಿಚಾರದಲ್ಲಿ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಯಾವುದೇ ಷಡ್ಯಂತ್ರ ನಡೆಸಿದರೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಾವು ಅಕ್ರಮ ಡೀಸೆಲ್ ಮಾರಿದ ಹಣದಲ್ಲಿ ಹೋರಾಟ ಮಾಡುತ್ತಿಲ್ಲ ಎಂದಿರುವ ಪುತ್ರನ್, ನಮ್ಮ ದುಡಿಮೆಯ ಖರ್ಚಿನಲ್ಲಿ ಹೋರಾಡುತ್ತೇವೆ ಎಂದು ತಿವಿದಿದ್ದಾರೆ.
ಮಾಜೀ ಶಾಸಕ ರಘುಪತಿ ಭಟ್ ಅವರಿಗೆ ತೊಂದರೆ ಕೊಡುತ್ತಿರುವ ಶಾಸಕ ಯಶ್ಪಾಲ್, ಇನ್ನು ಜನಸಾಮಾನ್ಯರಿಗೆ ಏನು ಮಾಡಿಯಾರು? ಎಂದು ಪ್ರಶ್ನಿಸಿರುವ ನಾಗೇಂದ್ರ ಪುತ್ರನ್, ನ್ಯಾಯಕ್ಕಾಗಿ ರಘುಪತಿ ಭಟ್ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
