ಕುಂದಾಪುರ: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ದುರ್ಬಳಕೆಗೆ ಸಿಐಟಿಯು ಆಕ್ಷೇಪ, ಶಾಸಕರಿಗೆ ಮನವಿ
ಕುಂದಾಪುರ: 2026-27 ಸಾಲಿನ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ, ಪಿಂಚಣಿ, ವೈದ್ಯಕೀಯ ವೆಚ್ಚ, ಅಪಘಾತ ಪರಿಹಾರಕ್ಕಾಗಿ ಇರುವ ನಿಧಿಯನ್ನು ದುರ್ಬಳಕೆ ಮಾಡಲು ತೀರ್ಮಾನಿಸಿರುವುದನ್ನು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಸಿಐಟಿಯು ಖಂಡಿಸಿದೆ.

ಈ ಬಗ್ಗೆ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಶನಿವಾರ ಮನವಿ ನೀಡಿರುವ ಸಂಘಟನೆಯ ಮುಖಂಡರು 60 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ ತರಬೇತಿ ಕೇಂದ್ರಗಳು, 104 ಶ್ರಮಿಕ ವಸತಿ ಶಾಲೆಗಳು ಹಾಗೂ 200 ಕೋಟಿ ರೂ ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪಿಸುವುದರಿಂದ ಕಾರ್ಮಿಕರ ಸೌಲಭ್ಯಗಳಿಗೆ ಹಣದ ಕೊರತೆಯುಂಟಾಗುತ್ತದೆ. ಕರ್ನಾಟಕದಲ್ಲಿ ಕಲ್ಯಾಣ ಮಂಡಳಿ ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ 2024-25 ಹಾಗೂ 2025-2026 ನೇ ಸಾಲಿನ ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಹಣ ಜಮೆಗೆ ಬಾಕಿ ಇರುವ ಬಗ್ಗೆಯೂ ಗಮನ ಸೆಳೆಯಲಾಯಿತು.

ಮನವಿಗೆ ಸ್ಪಂದಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಕಟ್ಟಡ ಕಾರ್ಮಿಕರ ಹಣ ಕಲ್ಯಾಣಕ್ಕಾಗಿ ಮಾತ್ರ ಬಳಸಲು ಮತ್ತು ಈಗಾಗಲೇ 62-63 ವರ್ಷ ಪ್ರಾಯದ ಕಟ್ಟಡ ಕಾರ್ಮಿಕರ ತಿರಸ್ಕರಿಸಿದ ಪಿಂಚಣಿ ಅರ್ಜಿಗಳ ಬಗ್ಗೆಯೂ ಮಾತನಾಡುವ ಭರವಸೆ ನೀಡಿದ್ದಾರೆ. ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಕೋಶಾಧಿಕಾರಿ ಚಂದ್ರಶೇಖರ್ ವಿ, ವಸಂತ್ ಕುಮಾರ್ ಮೊದಲಾದವರು ಇದ್ದರು.
