ಕೋಟ: ಪ್ರೇಕ್ಷಕರಿಂದಲೇ ಯಕ್ಷಗಾನ ಉಳಿದುಕೊಂಡಿದೆ ಎನ್ನುವುದನ್ನು ಕಲಾವಿದರು ಮರೆಯಬಾರದು – ಅಶೋಕ್ ಭಟ್ ತೀಟೆಗೆ ನಾಗೇಂದ್ರ ಪುತ್ರನ್ ತಿರುಗೇಟು

ಕೋಟ: ಪ್ರತಿಯೊಂದು ಕಲೆ, ಕಲಾವಿದನ ಅಳಿವು ಉಳಿವು ಪ್ರೇಕ್ಷಕರ ಕೈಯಲ್ಲಿದೆ. ಪ್ರೇಕ್ಷಕರು ಮನಸ್ಸು ಮಾಡಿದರೆ ಕಲಾವಿದರನ್ನು ಬೆಳೆಸುತ್ತಾರೆ. ಹಾಗೆಯೇ ಅಹಂಕಾರದಿಂದ ಸೊಕ್ಕುವ ಕಲಾವಿದರನ್ನು ಅದೇ ಪ್ರೇಕ್ಷಕರು ಹೇಳಹೆಸರಿಲ್ಲದಂತೆ ಮಾಡುತ್ತಾರೆ ಎನ್ನುವುದನ್ನು ಪ್ರೇಕ್ಷಕರಿಂದಲೇ ಬೆಳೆದು ಬಂದ ಉಜಿರೆ ಅಶೋಕ ಭಟ್ ಮರೆತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಹೆನ್ನಾಬೈಲಿನಲ್ಲಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಅಶೋಕ ಭಟ್ ಪ್ರೇಕ್ಷಕರ ಬಗ್ಗೆ ತೀರಾ ಕೀಳಾಗಿ ಮಾತನಾಡಿರುವ ಕುರಿತು ಅವರು ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಪ್ರೇಕ್ಷಕರು ಭಾಗವತರ ಕಂಠಸಿರಿಗೆ ಶಿಳ್ಳೆ ಹಾಕಿ ಅಭಿನಂದಿಸಿದ್ದಾರೆ. ಆದರೆ ಅಶೋಕ ಭಟ್ಟರಿಗೆ ಯಾಕೆ ಉರಿ ಹತ್ತಿತು ಎನ್ನುವುದು ಅರ್ಥವಾಗುತ್ತಿಲ್ಲ. ಕುಣಿಯಲು ಬಾರದವ ನೆಲ ಡೊಂಕು ಎಂಬಂತಿರುವ ಅಶೋಕ್ ಭಟ್ ವರ್ತನೆ, ಭಾಗವತರ ಬಗ್ಗೆ ನಿಮಗಿರುವ ಅಸೂಯೆ ರಂಗಸ್ಥಳಕ್ಕೆ ಮಾಡಿದ ಅವಮಾನ. ಪ್ರೇಕ್ಷಕರನ್ನು ಕಳೆದುಕೊಂಡು, ದಮ್ಕಿ ಹಾಕಿ ಕಲೆಯನ್ನು ಉಳಿಸುತ್ತೀರಿ ಎನ್ನುವ ಭ್ರಮೆಯಿಂದ ಅಶೋಕ ಭಟ್ ಮೊದಲು ಹೊರಬರಲಿ ಎಂದಿದ್ದಾರೆ.

ಅಶೋಕ ಭಟ್ ರಂಗಸ್ಥಳದಲ್ಲಿ ಸಂಸ್ಕೃತಿ ಮೀರಿ ವರ್ತಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ನಾಗೇಂದ್ರ ಪುತ್ರನ್, ಮೊದಲು ಕಲಾಭಿಮಾನಿಗಳು, ಕಲಾ ಪೋಷಕರು ಮತ್ತು ಪ್ರೇಕ್ಷಕರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಅಹಂಕಾರದ ಅಮಲಿನಲ್ಲಿ ಕಂಬಳ ಹಾಗೂ ಕೋಳಿ ಅಂಕದ ಬಗ್ಗೆ, ದೊಂಬರಾಟದ ಬಗ್ಗೆ ನಿಕೃಷ್ಟವಾಗಿ ವಾಚಾಳಿತನ ಪ್ರದರ್ಶಿಸುವ ಮೂಲಕ ಅಪಹಾಸ್ಯ ಮಾಡಿರುವುದಕ್ಕೂ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದೇ ಇದ್ದಲ್ಲಿ ಕರಾವಳಿಯ ಯಕ್ಷಪ್ರೇಮಿಗಳು ನಿಮ್ಮನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
