ಬೈಂದೂರು: ಎಲ್ಲರಿಗೂ ಮಾದರಿಯಾಗಿ – ಸ್ವ ಉದ್ಯೋಗ ಫಲಾನುಭವಿಗಳಿಗೆ ಸವಲತ್ತು ವಿತರಿಸಿದ ಶಾಸಕ ಗಂಟಿಹೊಳೆ

ಬೈಂದೂರು: ಸ್ವಂತ ಉದ್ಯೋಗ ಸೌಲಭ್ಯಗಳನ್ನು ಬಳಸಿ ಕೊಂಡು ಉದ್ಯೋಗದಾತರಾಗಿ ಇತರರಿಗೂ ಮಾದರಿಯಾಗಿ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿ ದೇವರಾಜು ಅರಸು ಅಭಿವೃದ್ಧಿ ನಿಗಮ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ವಿವಿಧ ಸ್ವ ಉದ್ಯೋಗ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಿ ಮಾತನಾಡಿದರು.

ಇದೇ ಸಂದರ್ಭ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 21 ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉದ್ಯಮ ಶೀಲತೆ ಯೋಜನೆಯಡಿಯಲ್ಲಿ ಆಯ್ಕೆಯಾದ 3 ಜನ ಫಲಾನುಭವಿಗಳಿಗೆ ರೂ.5 ಲಕ್ಷ ಮೊತ್ತದ ಸಾಲ ಸಹಾಯಧನ ಹಾಗೂ 07 ಜನ ಫಲಾನುಭವಿಗಳಿಗೆ ರೂ. 1 ಲಕ್ಷ ಮೊತ್ತದ ಸಾಲ ಸಹಾಯಧನ ಮಂಜೂರಾತಿ ಪತ್ರವನ್ನು ಶಾಸಕರು ವಿತರಣೆ ಮಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಆಯ್ಕೆಯಾದ ನಾಲ್ಕು ಜನ ಫಲಾನುಭವಿಗಳಿಗೆ ಟ್ಯಾಕ್ಸಿ ವಾಹನಗಳ ಕೀ ಯನ್ನು ಶಾಸಕರು ಹಸ್ತಾಂತರಿಸಿದರು.

ದೇವರಾಜು ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜು, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ್ ಉಪಸ್ಥಿತರಿದ್ದರು.
