ಸಿದ್ದರಾಮಯ್ಯ ಸರಕಾರದ ಬಜೆಟ್ ನಲ್ಲಿ ಆದಿವಾಸಿಗಳಿಗೆ ವಂಚನೆಯಾಗಿದೆ : ಶ್ರೀಧರ ನಾಡ

ಕುಂದಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಸರ್ಕಾರದ 2026 – 27 ನೇ ಸಾಲಿನ ಆಯವ್ಯಯದಲ್ಲಿ ಆದಿವಾಸಿಗಳನ್ನು ವಂಚಿಸಲಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಿವಾಸಿ ಅಭಿವೃದ್ಧಿ ನಿಗಮ ಕೇವಲ ನಾಮಕಾವಾಸ್ತೇಗಾಗಿ ಮಾತ್ರ ಸ್ಥಾಪಿಸಿದರೆ ಸಾಲದು ಅದಕ್ಕೆ ಸ್ವತಂತ್ರ ಅಧಿಕಾರ, ಬಜೆಟ್ ನೀಡುವುದು ಅಗತ್ಯ. ಆದರೆ ಬಜೆಟ್ ನಲ್ಲಿ ಒಂದು ರೂಪಾಯಿಯ ಅನುದಾನವನ್ನೂ ಮೀಸಲಿರಿಸಿಲ್ಲ. ಆಶ್ರಮ ಶಾಲೆಯಲ್ಲಿ ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ, ಅಲ್ಲಿ ಹತ್ತು, ಹದಿನೈದು ವರ್ಷಗಳ ಕಾಲ ಗುತ್ತಿಗೆ ಮೇರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಕಾಯಂ ಶಿಕ್ಷಕರಾಗಿ ನೇಮಕ ಮಾಡುವ ಘೋಷಣೆ ಇಲ್ಲ. ಆಶ್ರಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ ಎಂದು ಶ್ರೀದರ್ ಹೇಳಿದ್ದಾರೆ.
ಅರಣ್ಯ ಆಧಾರಿತ ಆದಿವಾಸಿಗಳು ಮತ್ತು ಪಿವಿಟಿಜಿ ಬುಡಕಟ್ಟುಗಳಿಗೆ ನಿವೇಶನ, ಅರಣ್ಯ ಭೂಮಿ ಮಂಜೂರಾತಿ, ಅರಣ್ಯ ಭೂಮಿಯಲ್ಲಿ ಸಾಗುವಳಿದಾರಿಗೆ ಯಾವುದೇ ಅಭಿವೃದ್ದಿ ಯೋಜನೆಗಳು, ಸಾಲ ಸೌಲಭ್ಯಗಳನ್ನು ಒದಗಿಸಲು ಈ ಬಜೆಟ್ ನಲ್ಲಿ ಸಾಧ್ಯವಾಗಿಲ್ಲ. ಈ ಸಮುದಾಯದ ವಸತಿ ನಿರ್ಮಾಣಕ್ಕಾಗಿ 4.5 ಲಕ್ಷದಿಂದ 8 ಲಕ್ಷಕ್ಕೆ ಏರಿಕೆ ಮಾಡಲು ಕೋರಲಾಗಿದೆ. ಆದರೆ ಹತ್ತು ವರ್ಷಗಳ ಹಿಂದೆ ಇರುವ ಅದೇ ಅನುದಾನ ಮುಂದುವರಿಸಲಾಗಿದೆ. ನಯಾಪೈಸೆ ಅನುದಾನ ಹೆಚ್ಚಿಸಿಲ್ಲ.
ಮುಖ್ಯವಾಗಿ ಕರ್ನಾಟಕ ಅನುಸೂಚಿತ ಬುಡಕಟ್ಟು ಉಪಯೋಜನೆಗೆ 12,828 ಕೋಟಿ ಅನುದಾನ ಒದಗಿಸಲಾಗಿದೆ. ಕಳೆದ ಬಾರಿಗಿಂತ 2000 ಕೋಟಿ ಹೆಚ್ಚಿನ ಅನುದಾನ ನೀಡಿದರು ಸಹ ಇದರ ಬಳಕೆಯ ಪ್ರಶ್ನೆ ಪ್ರಶ್ನಾತೀತವಾಗಿದೆ. ಈ ಅನುದಾನ ಬುಡಕಟ್ಟು ಜನರಿಗೆ ವಯಕ್ತಿಕ ಮತ್ತು ಸಮುದಾಯದ ಉದ್ದೇಶಕ್ಕಾಗಿ ಅವರ ಅಭಿವೃದ್ಧಿಗೆ ಬಳಸಬೇಕಾದದ್ದು. ಆದರೆ ಕಳೆದ ಬಾರಿ ಇದೇ ಸರಕಾರ ತನ್ನ ಪ್ರತಿಷ್ಠಿತ ಗ್ಯಾರಂಟಿ ಯೋಜನೆಗಳಿಗೆ ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪಯೋಜನೆ ಅನುದಾನ ದುರ್ಬಳಕೆ ಮಾಡಿಕೊಂಡಿದೆ. ಈ ದುರ್ಬಳಕೆ ವಿರುದ್ಧ ಪಕ್ಷಾತೀತವಾಗಿ, ಮತ್ತು ಎಲ್ಲಾ ಆದಿವಾಸಿ, ದಲಿತ ಸಂಘಟನೆಗಳು ಆಕ್ಷೇಪಣೆ, ಒತ್ತಡ ಹೇರಿದರು ಸಹ ಈ ಬಜೆಟ್ ನಲ್ಲಿ ಅದರ ಕುರಿತಾಗಿ ಒಂದೇ ಒಂದು ದ್ವನಿ ಎತ್ತಲಿಲ್ಲ. ಈ ಅನುದಾನ ಜೊತೆಗೆ ಗ್ಯಾರಂಟಿ ಯೋಜನೆಗಳು ಪ್ರತೇಕವಾಗಿ ಸಿಗಬೇಕು. ಸರಕಾರ ಆದಿವಾಸಿಗಳ ಅನುದಾನ ದುರ್ಬಳಕೆ ಮುಂದುವರಿಸಿದೆ. ಕಳೆದ ಬಾರಿಯ ಬಜೆಟ್ ಗಿಂತ ಈ ಬಾರಿ ಬಜೆಟ್ ಏನು ಭಿನ್ನವಾಗಿಲ್ಲ ಕೇವಲ ಅಂಕಿ ಅಂಶಗಳ ಸ್ವಲ್ಪ ಬದಲಾವಣೆ ಹೊರತು ಆದಿವಾಸಿ ಸಮುದಾಯಗಳಿಗೆ ವಂಚನೆ ಮುಂದುವರೆದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಜೆಟ್ ನ ಕೆಲವು ಅಂಶಗಳನ್ನು ಸ್ವಾಗತಿಸಿದ ಅವರು, ಅರಣ್ಯ ಮತ್ತು ಅರಣ್ಯ ಅಂಚಿನಲ್ಲಿ ವಾಸವಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರಿಶಿಷ್ಟ ಪಂಗಡ ಹಾಗೂ ಪಿವಿಟಿಜಿ ಗಳಿಗೆ ಪ್ರತೇಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸುದಾಗಿ ಮತ್ತು ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆರೈಕೆಗೆ 119 ಮಹಿಳಾ ಕೇರ್ ಟೇಕರ್ ಹುದ್ದೆ ಮಂಜೂರು ಮಾಡಲಾಗುವುದು ಎನ್ನುವ ಘೋಷಣೆಯನ್ನು ಸಮಿತಿ ಸ್ವಾಗತಿಸುತ್ತದೆ ಎಂದಿದ್ದಾರೆ.
