ಕುಂದಾಪುರ: ನೇರಂಬಳ್ಳಿಯಲ್ಲಿ ಹುಚ್ಚುನಾಯಿ ದಾಳಿ – ಮೂವರಿಗೆ ಗಾಯ, ಒಬ್ಬರು ಗಂಭೀರ
ಕುಂದಾಪುರ: ನಗರದ ನೇರಂಬಳ್ಳಿಯಲ್ಲಿ ಹುಚ್ಚುನಾಯಿ ಕಚ್ಚಿ ಮೂವರು ಗಾಯಗೊಂಡಿದ್ದು, ಆ ಪೈಕಿ ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಹುಚ್ಚು ನಾಯಿ ದಾಳಿಗೊಳಗಾದವರನ್ನು ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಂಬಳ್ಳಿ ನಿವಾಸಿಗಳಾದ ಸುಬ್ರಾಯ ಶೇಟ್ (80), ಪಾರ್ವತಿ (40) ಹಾಗೂ ರೇಶ್ಮಾ (38) ಎಂದು ಗುರುತಿಸಲಾಗಿದೆ.



ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಸುಬ್ರಾಯ ಶೇಟ್ ಸ್ನಾನಕ್ಕೆ ಹೊರಡಲೆಂದು ಮನೆಯಿಂದ ಹೊರಬಂದ ಸಂದರ್ಭ ನಾಯಿ ದಾಳಿ ಮಾಡಿದೆ. ಮೊದಲ ಬಾರಿ ಕಚ್ಚಿದಾಗ ನಿಯಂತ್ರಣ ತಪ್ಪಿದ ಸುಬ್ರಾಯ ಶೇಟ್ ನೆಲಕ್ಕೆ ಬಿದ್ದಿದ್ದಾರೆ. ಬಳಿಕ ಹಲವಾರು ಬಾರಿ ಕಚ್ಚಿ ಕೈಕಾಲುಗಳ ಮಾಂಸ ಕಿತ್ತು ಹಾಕಿದೆ. ಬಳಿಕ ಸ್ಥಳೀಯರು ಓಡಿ ಬಂದಾಗ ನಾಯಿ ಓಡ ಹೋಗಿದ್ದು, ಬಳಿಕ ಅಲ್ಲೇ ಸಮೀಪದ ಮತ್ತಿಬ್ಬರು ಮಹಿಳೆಯರಿಗೆ ಕಚ್ಚಿ ಪರಾರಿಯಾಗಿದೆ.


ಗಾಯಗೊಂಡ ಮೂವರೂ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಪಟ್ಟವರು ಹುಚ್ಚಿನಾಯಿ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
