ಧಾರ್ಮಿಕತೆ ಜೀವನ ಕ್ರಮವಾಗಲಿ – ಬೈಂದೂರು ಉತ್ಸವ ಉದ್ಘಾಟಿಸಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅಭಿಮತ




ಬೈಂದೂರು: ಧಾರ್ಮಿಕತೆ ಎನ್ನುವುದು ಗೊಡ್ಡು ಸಂಪ್ರದಾಯವಾಗಬಾರದು, ಬದಲಿಗೆ ಅದು ಜೀವನ ಕ್ರಮದಲ್ಲಿ ನಿಯತ್ತನ್ನು ಪಾಲಿಸುವಂತಾಗಬೇಕು. ಬೈಂದೂರು ಉತ್ಸವದ ಮೂಲಕ ಗ್ರಾಮಾಭಿವೃದ್ಧಿ ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಬೈಂದೂರು ಉತ್ಸವದ ಮೂಲಕ ಮುನ್ನಡೆಸುತ್ತಿರುವುದು ಸಂತಸ ತಂದಿದೆ. ಸರ್ಕಾರಗಳು ಉತ್ಸವದ ಮೂಲಕ ಸಂಸ್ಕೃತಿ ಉಳಿಸುವಂತಾಗಬೇಕು. ಧಾರ್ಮಿಕ ಕ್ಷೇತ್ರಗಳ ಪ್ರಭಾವ ಬೈಂದೂರಿನ ಜನರಿಗೆ ಸತ್ಯ, ನ್ಯಾಯ ಧರ್ಮಗಳನ್ನು ಕಲಿಸಿಕೊಟ್ಟಿದೆ. ಬೈಂದೂರು ಉತ್ಸವ ಜ್ಯೋತಿಯಾಗುವ ಮೂಲಕ ಧರ್ಮದ ದಾರಿಯಲ್ಲಿ ಸಂತರಾಗಿ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸಂಶಯ ನಿವಾರಣೆಯ ಕಾರ್ಯಕ್ರಮವಾಗಲಿ ಎಂದು ಧರ್ಮಸ್ಥಳದ ವೀರೆಂದ್ರ ಹೆಗ್ಗಡೆ ಹೇಳಿದರು. ಅವರು ಶನಿವಾರ ಬೈಂದೂರಿನ ಗಾಂಧೀ ಮೈದಾನದಲ್ಲಿ ಬೈಂದೂರು ಉತ್ಸವ 2026ನ್ನು ಉದ್ಘಾಟಿಸಿ, ಗೌರವ ಸ್ವೀಕರಿಸಿ ಮಾತನಾಡಿದರು.


ಬಳಿಕ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಯುವಜನತೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ಬೈಂದೂರು ಉತ್ಸವದ ಉದ್ಧೇಶಗಳಲ್ಲಿ ಒಂದು. ಆ ಮೂಲಕ ಪ್ರವಾಸೋದ್ಯಮದ ಹಬ್ಬವಾಗಿ, ರೈಲ್ವೇ, ಹೈವೇ ಮೊದಲಾದ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಕೆಲಸಗಳಾಗುತ್ತಿವೆ. ಬೈಂದೂರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಡುವ ಕೆಲಸವನ್ನು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದ ತಂಡ ನಡೆಸುತ್ತಿದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಇಂತಹಾ ಉತ್ಸವಗಳು ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ನಡೆಸುವಂತಾಗಬೇಕು. ಆ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಎಲ್ಲಾ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನಮಾನಸಕ್ಕೆ ಮುಟ್ಟಿಸುವಲ್ಲಿ ಸಹಕಾರಿಯಾಗಬೇಕು ಎಂದರು. ರಾಜ್ಯ ಸರ್ಕಾರ ಮಹಿಳೆಯರು ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡುತ್ತಿದೆ ಎಂದ ಅವರು, ಸರ್ಕಾರದ ಯೋಜನೆಗಳು ತಳಮಟ್ಟವನ್ನು ತಲುಪಬೇಕು ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ಬೈಂದೂರು ಉತ್ಸವದ ಪೂರ್ವ ತಯಾರಿಗೆ ಸಂಬಂಧಿಸಿ ನಡೆದ ಗ್ರಾಮೋತ್ಸವ ಯಶಸ್ವಿಯಾಗುವ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಿದೆ. ಬೈಂದೂರು ಉತ್ಸವ ಕೇವಲ ಉತ್ಸವವಾಗದೆ ಸರ್ಕಾರದ ಇಲಾಖೆಗಳ ಸಹಯೋಗದೊಂದಿಗೆ ಜನಮೂಲಕ್ಕೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದರು.







ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ ಕೊಡ್ಲಿ, ಕೊಲ್ಲೂರು ದೇವಳದ ಪ್ರಧಾನ ಅರ್ಚಕರಾದ ಕೆ.ರಾಮಚಂದ್ರ ಅಡಿಗ, ಕೆ.ಎನ್ ಶ್ರೀಧರ ಅಡಿಗ,ಕೆ.ಎನ್.ಸುಬ್ರಹ್ಮಣ್ಯ ಅಡಿಗ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಅನೀಲ್ ಕುಮಾರ್ ಬಿ.ಸಿ ಟ್ರಸ್ಟ್ ಧರ್ಮಸ್ಥಳ,ಉದ್ಯಮಿ ವೆಂಕಟೇಶ ಕಿಣಿ ಬೈಂದೂರು, ಬೈಂದೂರು ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರಣುತ್ ಗಾಣಿಗ ನಿರೂಪಿಸಿದರು. ಪೂರ್ಣಿಮಾ ಪೈ ಪ್ರಾರ್ಥಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಬಿಜೂರು ವಂದಿಸಿದರು.
