BlogEconomyGovernmentHighlightsHuman storiesLifestyleLocal newsNatureOthersPoliticsProtestState newsTop StoriesTrending

ಯಾರ ಕೈಕಾಲು ಜಪ್ಪುತ್ತೀರಿ? ಬೈಂದೂರು ಶಾಸಕ ಗಂಟಿಹೊಳೆ ವಿರುದ್ಧ ಮಾಜೀ ಶಾಸಕ ಗೋಪಾಲ ಪೂಜಾರಿ ಆಕ್ರೋಶ – ಜನವರಿ 25ರಂದು ಕಂಡ್ಲೂರಿನಲ್ಲಿ ವಾರಾಹಿ ಉಳಿಸಿ ಜನಾಂದೋಲನ

Aware others:

ಕುಂದಾಪುರ: ಇತ್ತೀಚೆಗೆ ಸಿದ್ಧಾಪುರದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಬೈಂದೂರು ಶಾಸಕರು ನನ್ನ ಮೇಲೆ ನಿರಾಧಾರ ಆರೋಪ ಮಾಡಿದ್ದಾರೆ. ಶಾಸಕರು ಕೈಕಾಲು ಜಪ್ಪಿ ಹಾಕುತ್ತೇನೆ ಎನ್ನುವ ಮೂಲಕ ಬೆದರಿಕೆ ಹಾಕಿದ್ದಾರೆ. ಯಾರ ಕೈಕಾಲು ಜಪ್ಪುತ್ತೀರಿ? ರೈತರದ್ದೋ ಅಥವಾ ನನ್ನದೋ ಎನ್ನುವುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎಂದು ಬೈಂದೂರಿನ ಮಾಜೀ ಶಾಸಕ ಕೆ ಗೋಪಾಲ ಪೂಜಾರಿ ಗುಡುಗಿದ್ದಾರೆ. ಅವರು ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಕಾಲು ಜಪ್ಪಿ ಹಾಕುತ್ತೇವೆ ಎಂದು ಒಬ್ಬ ಶಾಸಕ ಹೇಳುತ್ತಾರೆ ಎಂದರೆ ಬೈಂದೂರಿನ ರಾಜಕೀಯ ವ್ಯವಸ್ಥೆ ಎಲ್ಲಿಗೆ ಹೋಯಿತು? ಎಂದು ಅವರು ಪ್ರಶ್ನೆ ಮಾಡಿದರು.

ಸಿದ್ದಾಪುರ ಏತ ನೀರಾವರಿ ವಿಚಾರದಲ್ಲಿ ನಾನು 2023ರಲ್ಲಿಯೇ ಮುಖ್ಯಮಂತ್ರಿಗಳಿಗೆ ಪತ್ರ ನೀಡಿದ್ದೆ. ಸಿದ್ಧಾಪುರ ಏತ ನೀರಾವರಿ ಮಂಜೂರಾತಿ ಆದ ಬಳಿಕವೂ 2025ರಲ್ಲಿ ಪೂರಕವಾಗಿ ಪತ್ರ ನೀಡಿದ್ದೇನೆ. ಡ್ಯಾಂನ ಕೆಳಭಾಗದ 600 ಮೀಟರ್ ಕೆಳಗೆ ಜಾಕ್ವೆಲ್ ನಿರ್ಮಿಸಲು, ತಜ್ಞರಿಂದ ಪರಿಶೀಲನೆ ನಡೆಸುವಂತೆ ಪತ್ರ ನೀಡಿದ್ದೇವೆಯೇ ಹೊರತು ಯೋಜನೆಯನ್ನು ರದ್ದು ಮಾಡುವಂತೆ ಎಲ್ಲೂ ಬರೆದಿಲ್ಲ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. 

ಸಿದ್ದಾಪುರದಿಂದ ಆಜ್ರಿ ಮೂಲಕ ಬಾಂಡ್ಯ ಕೊಡ್ಲಾಡಿ ನೇರಳಕಟ್ಟೆ ತನಕ ನೀರು ಬರುತ್ತದೆ. ನೇರಳಕಟ್ಟೆಗೆ ಸೌಕೂರು ಏತನೀರಾವರಿ ಹತ್ತಿರವಿದೆ ಒಂದು ಕಿ.ಮೀ ಒಳಗೆ ಇದೆ. ನೇರಳಕಟ್ಟೆಗೆ ಸೌಕೂರು ಏತ ನೀರಾವರಿ ಯೋಜನೆಯಿಂದ ನೀರು ಕೊಡಬಹುದು. ಅಷ್ಟು ದೂರದಿಂದ ಬರಬೇಕಾಗಿಲ್ಲ. ಆಜ್ರಿ ಬಲಭಾಗದಲ್ಲಿ ಇರುವ ರೈತರಿಗೆ ನೀರು ಕೊಡಲಿಲ್ಲ. ಎಡಭಾಗದವರಿಗೆ ಮಾತ್ರ ಕೊಟ್ಟಿದ್ದಿರಿ. ಕೆಳ ಬಾಂಡ್ಯ, ಕೆಳ್ಮನೆ ಭಾಗದ ಬಡ ರೈತರಿಗೆ ನೀರಿಲ್ಲ. ಹೊಸಂಗಡಿಯಲ್ಲಿ 8 % ನೀರು ಕೊಡುತ್ತಿರಿ. ವಾರಾಹಿ ಇರುವುದೇ ಹೊಸಂಗಡಿ ಭಾಗದಲ್ಲಿ. ಸಿದ್ದಾಪುರದ 2-3 ವಾರ್ಡಿಗೆ ಮಾತ್ರ ನೀರು. 70% ಸಿದ್ದಾಪುರಕ್ಕೆ ನೀರು ಇಲ್ಲ. ಈಗಾಗಲೇ‌ ಸಿದ್ಧಗೊಂಡಿರುವ ತಜ್ಞರ ಸಮಿತಿಯಲ್ಲಿ ಸುರತ್ಕಲ್‌ನ ಎನ್.ಐ.ಟಿ.ಕೆ ತಜ್ಞರನ್ನು ಸೇರಿಸಿ ಪರಿಶೀಲನೆ ಮಾಡಿ ಎಲ್ಲಾ ರೈತರಿಗೆ ನೀರು ಸಿಗುವಂತಾಗಬೇಕು ಎಂದು ನಾವು ಮುಖ್ಯಮಂತ್ರಿಗಳಲ್ಲಿ ಆಗ್ರಹ ಮಾಡಿದ್ದೇವೆ ಹೊರತು ಎಲ್ಲೂ ಸಿದ್ದಾಪುರ ಏತ ನೀರಾವರಿ ಯೋಜನೆ ರದ್ದು ಮಾಡಿ ಎಂದು ಸರಕಾರಕ್ಕೆ ಪತ್ರ ಕೊಟ್ಟಿಲ್ಲ ಎಂದರು.

ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹೋಗಿ ಕರಪತ್ರ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಏಳು ಚುನಾವಣೆ ಎದುರಿಸಿದ್ದೇನೆ. ಯಾವುದೇ ಗುತ್ತಿಗೆದಾರರಲ್ಲಿ ಲಾಬಿ ಮಾಡಿಲ್ಲ. ನಾನು ಸ್ವಂತ ದುಡಿಮೆ, ಹೋಟೆಲ್ ಉದ್ಯಮದಿಂದ ರಾಜಕೀಯ ಮಾಡಿದ್ದೇನೆ ಹೊರತು ಯಾವೊಬ್ಬ ಗುತ್ತಿಗೆದಾರರಿಗೆ ನನ್ನನ್ನು ಮಾರಿಕೊಳ್ಳಲು ಹೋಗಿಲ್ಲ. ಜಿ.ಶಂಕರ್ ನಮ್ಮ ಮಟ್ಟದಲ್ಲಿ ಇಲ್ಲ, ಅವರು ರಾಜ್ಯ ಮಟ್ಟದ ದೊಡ್ಡ ಗುತ್ತಿಗೆದಾರರು. ನಮ್ಮಂಥವರ ಅವಶ್ಯಕತೆ ಅವರಿಗೆ ಏನಿದೆ? ಯಾವ ಮುಖ್ಯಮಂತ್ರಿ ಹತ್ತಿರವೂ ಹೋಗಿ ಕೆಲಸ ಮಾಡಿಕೊಂಡು ಬರುವ ತಾಕತ್ತು ಅವರಿಗೆ ಇದೆ.  ಅದು ಬಿಜೆಪಿ ಸರ್ಕಾರವಿರಲಿ, ಕಾಂಗ್ರೆಸ್ ಸರಕಾರವಿರಲಿ, ಅವರಿಗೆ ಕೆಲಸ ಮಾಡಿಸಿಕೊಂಡು ಬರಲು ಸಾಮರ್ಥ್ಯವಿದೆ. ನಮ್ಮ ಅವಶ್ಯಕತೆ ಇಲ್ಲ. ಈ ಜಿಲ್ಲೆಗೆ ಅವರ ಕೊಡುಗೆ ಸಾಕಷ್ಟು ಇದೆ. ಹಾಗಾಗಿ ನಾವು ಅವರ ಹಂಗಲ್ಲಿ ಇಲ್ಲ, ಅವರು ನಮ್ಮ ಹಂಗಲ್ಲಿ ಇಲ್ಲ. ಇವರು ವ್ಯರ್ಥ ಅಪಪ್ರಚಾರ ಮಾಡುವ ಕಾಂಗ್ರೆಸ್‌ನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಸರಿಯಾದ ಉತ್ತರ ಕೊಡಬೇಕೆನ್ನುವ ನಿಟ್ಟಿಲ್ಲಿ ಕಾಂಗ್ರೆಸ್‌ನ್ನು ಮುಗಿಸುವ ಸಂಚನ್ನು ಮಾಡಿರುವ ಗಂಟಿಹೊಳೆ ಅವರಿಗೆ ಜನವರಿ 25ರಂದು 10 ಗಂಟೆಗೆ ಕಂಡ್ಲೂರಲ್ಲಿ ಜನಾಂದೋಲನ ವಾರಾಹಿ ಉಳಿಸಿ ಎನ್ನುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಗಂಟಿಹೊಳೆ ಅವರು ಜನರಿಗೆ ತಪ್ಪು ಸಂದೇಶ ನೀಡಿ ಜಿ.ಪಂ ತಾ.ಪಂ, ಗ್ರಾ.ಪಂ. ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ನ್ನು ಮುಗಿಸಲು ಸಂಚು ರೂಪಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನಾಗಿ, ಮುಖಂಡನಾಗಿ ಕಾಂಗ್ರೆಸ್‌ನ ಋಣ ನನ್ನ ಮೇಲಿದೆ. ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆ ಮಾಡುವುದಕ್ಕೆ ಸದಾ ಸಿದ್ಧನಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರನ್ನು ಮುಗಿಸುವ ಹಗಲುಗನಸು ಕಾಣಬೇಡಿ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸಂತೋಷ ಶೆಟ್ಟಿ ಬಲಾಡಿ ,ಬಿಲ್ಲವ ಸಂಘದ ಮುಖಂಡರಾದ ಅಶೋಕ ಪೂಜಾರಿ ಬೀಜಾಡಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಗುಲ್ವಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುದೇಶ ಶೆಟ್ಟಿ, ವಿಜಯ ಪುತ್ರನ್, ಅಕ್ಷಯ ಶೆಟ್ಟಿ, ಶ್ರೀನಿವಾಸ ಸೌಡ, ಯೋಗೀಶ ಪೂಜಾರಿ ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!