ಶಿರೂರು: ಅಕ್ರಮ ಮೀನು ಸಂಸ್ಕರಣಾ ಘಟಕ ತೆರವಿಗೆ ಗ್ರಾಮಸ್ಥರ ಆಗ್ರಹ – ಪ್ರತಿಭಟನೆಯ ಎಚ್ಚರಿಕೆ
ಶಿರೂರು: ಇಲ್ಲಿನ ಬಪ್ಪನ ಬಯಲು ಎಂಬಲ್ಲಿ ಅಕ್ರಮವಾಗಿ ಮೀನು ಕಟ್ಟಿಂಗ್ ಮತ್ತು ಪ್ರೊಸೆಸಿಂಗ್ ಘಟಕ ತಲೆಯೆತ್ತಿದ್ದು, ನದೀ ತೀರ ಮತ್ತು ಜನವಸತಿ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಪ್ಪನ ಬಯಲು ಎಂಬಲ್ಲಿ ಸರ್ವೇ ನಂಬರ್ 363ರಲ್ಲಿ ಊರಿನ ಏಕೈಕ ನದಿಯ(ದೇವತಾ ಹೊಳೆ) ಹರಿಯುತ್ತಿದೆ. ಅಲ್ಲದೇ ಈ ಪ್ರದೇಶದಲ್ಲಿ ಜನವಸತಿಯಿದೆ. ಆದರೆ ಇದೇ ಪ್ರದೇಶದಲ್ಲಿ ಅಕ್ರಮವಾಗಿ ಮೀನು ಫ್ಯಾಕ್ಟರಿ/ಪ್ರೊಸೆಸಿಂಗ್ ಯೂನಿಟ್ ಕಾರ್ಯಾಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಫ್ಯಾಕ್ಟರಿಯಿಂದ ಹೊರಹೊಮ್ಮುತ್ತಿರುವ ಮಾಲಿನ್ಯ ನೀರು, ವಾಸನೆ ಮತ್ತು ತ್ಯಾಜ್ಯಗಳನ್ನು ನೇರವಾಗಿ ನದಿಗೆ ಬಿಡುತ್ತಿದ್ದು ಇದು ಮಾನವ ಆರೋಗ್ಯ, ಪರಿಸರ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಅಕ್ರಮ ಘಟಕವು ನದಿ/ಹೊಳೆ ತೀರದಲ್ಲಿ ಸ್ಥಾಪಿತವಾಗಿದ್ದು, ಪರಿಸರ ಸಂರಕ್ಷಣಾ ಕಾಯ್ದೆ–1986, ವಾಟರ್ (ಪ್ರೆವೆನ್ಷನ್ ಅಂಡ್ ಕಂಟ್ರೋಲ್ ಆಫ್ ಪಲ್ಯೂಷನ್) ಕಾಯ್ದೆ–1974, ಏರ್ ಪಲ್ಯೂಷನ್ ಕಾಯ್ದೆ–1981, ಹಾಗೂ ಪಂಚಾಯತ್ ರಾಜ್ ಕಾಯ್ದೆ–1993 ಸೇರಿದಂತೆ ಅನೇಕ ಕಾನೂನುಗಳ ನೇರ ಉಲ್ಲಂಘನೆಯಲ್ಲಿದೆ. ಘಟಕದವರು ಕೇವಲ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು, ಅದನ್ನೇ ಆಧಾರವಾಗಿ ಮಾಡಿಕೊಂಡು ಉದ್ಯಮ ಪರವಾನಗಿ ಇಲ್ಲದೆ ಅನಧಿಕೃತ ಕೈಗಾರಿಕಾ ಚಟುವಟಿಕೆ ನಡೆಸುತ್ತಿದೆ. ಇಲ್ಲಿ ಉತ್ಪತ್ತಿಯಾಗುವ ಮೀನು ತ್ಯಾಜ್ಯ ಹಾಗೂ ಮಲಿನ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಈ ನದಿ ನೀರನ್ನು ನಮ್ಮ ಗ್ರಾಮಸ್ಥರು ಕುಡಿಯುವ ನೀರಾಗಿ, ಪಶುಸಂಗೋಪನೆ ಹಾಗೂ ಕೃಷಿ ಕಾರ್ಯಗಳಿಗೆ ಬಳಸುತ್ತಿರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ, ಪರಿಸರ ಮಾಲಿನ್ಯ, ಶ್ವಾಸಕೋಶ ಮತ್ತು ಸೋಂಕು ರೋಗಗಳ ಹರಡುವಿಕೆ ಸಂಭವಿಸುವ ಭೀತಿಯಿದೆ. ಇದು ಭಾರತ ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ಭದ್ರಪಡಿಸಿದ ಜೀವಿಸುವ ಹಕ್ಕಿಗೆ ನೇರ ಧಕ್ಕೆ ಆಗಿದೆ.

ಈ ಘಟಕವು ಜನವಸತಿ ಪ್ರದೇಶದ ಮಧ್ಯಭಾಗದಲ್ಲೇ ಇರುವುದರಿಂದ ಪ್ರತಿದಿನ ಉಂಟಾಗುತ್ತಿರುವ ಅಸಹನೀಯ ದುರ್ವಾಸನೆ ಗ್ರಾಮಸ್ಥರ ದೈನಂದಿನ ಜೀವನವನ್ನು ಅತೀವ ಕಷ್ಟಕರವಾಗಿಸಿದೆ. ವಯೋವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿದ್ದಾರೆ. ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಿರುವ ಗ್ರಾಮಸ್ಥರು, ಸಂಬಂಧಪಟ್ಟವರು ತಕ್ಷಣ ಕ್ರಮಕ್ಕೆ ಮುಂದಾಗದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
