AccidentBlogCrime newsEconomyEducationHighlightsHuman storiesLifestyleLocal newsObituaryOthersProtestState newsTop StoriesTrendingWomen Care

ಕುಂದಾಪುರ: ಟಿಪ್ಪರ್ & ಸರ್ಕಾರೀ ಬಸ್ ಅಪಘಾತ – ಮೂವರ ವಿರುದ್ಧ ದೂರು ದಾಖಲು, ಇಬ್ಬರ ಬಂಧನ

Aware others:

ಇತ್ತೀಚಿನ ದಿನಗಳಲ್ಲಿ ಟಿಪ್ಪರ್ ಚಾಲಕರ ಪೈಕಿ ಕೆಲವರು ಅತಿಯಾಗಿ ಕುಡಿದು ಸ್ಪರ್ಧೆಯಲ್ಲಿ ವಾಹನ ಚಲಾಯಿಸುತ್ತಿದ್ದು, ಹಲವಾರು ಅಪಘಾತಗಳಿಗೆ, ಜೀವಹಾನಿಗೆ ಕಾರಣರಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಟಿಪ್ಪರ್ ಚಾಲಕರು ಪೊಲೀಸರು ಮತ್ತು ಆರ್.ಟಿ.ಒ ಇಲಾಖೆಯ ಅಧಿಕಾರಿಗಳು ಮತ್ತು ವಾಹನಗಳ‌ ಮೇಲೆ ಅಪಘಾತ ನಡೆಸಿ, ಕಾನೂನಿನ ಕುಣಿಕೆಯಿಂದ ಬಚಾವಾದರೆ ಆಶ್ಚರ್ಯ ಪಡಬೇಕಿಲ್ಲ. ಆಗ ಸಾರ್ವಜನಿಕರು ಮಾತ್ರ ಹೆಣ ಎತ್ತಲೂ ಬಾರದೆ, ಬಾಯಿಗೆ ಗುಟುಕು ನೀರೂ ಕೊಡದೇ “ಕರ್ಮ ರಿಟರ್ನ್ಸ್” ಎಂದು ಕಣ್ಮುಚ್ಚಿ ಕುಳಿಕೊಳ್ಳಲಿದ್ದಾರೆ ಎನ್ನುವುದು ಸಾರ್ವಜನಿಕ‌ ಅಭಿಪ್ರಾಯ.

ಕುಂದಾಪುರ: ಶೆಟ್ರಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಟಿಪ್ಪರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಟಿಪ್ಪರ್ ಚಾಲಕ ರಾಘವೇಂದ್ರ ಹಾಗೂ ಟಿಪ್ಪರ್ ಮಾಲಕ ಶ್ರೀಧರ್ ಬಂಧಿತರು. ಕೆಂಪು ಮಣ್ಣು ಜಾಗದ ಮಾಲಿಕ ಮಂಜುನಾಥ್ ಮೇಲೆಯೂ ಪ್ರಕರಣ ದಾಖಲಾಗಿದೆ.

ಸೋಮವಾರ ಸಂಜೆ 3.45ಕ್ಕೆ ಕುಂದಾಪುರದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡ ಕೆಎಸ್‌ಆರ್‌ಟಿಸಿ ಬಸ್ ತಲ್ಲೂರು-ನೇರಳಕಟ್ಟೆ ಮಾರ್ಗವಾಗಿ ಆಜ್ರಿ ಕಡೆಗೆ ತೆರಳುತ್ತಿದ್ದಾಗ 4:20 ಸುಮಾರಿಗೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಟಿಪ್ಪರ್‌ ಬಸ್‌ನ ಬಲ ಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ 39 ಮಂದಿ ಪ್ರಯಾಣಿಕರ ಪೈಕಿ 18 ಮಂದಿಗೆ ಗಾಯಗಳಾಗಿತ್ತು. ಇವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸಹಿತ ಮೂರು ಮಂದಿ ತೀವೃ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ. ಈ ಸಂಬಂಧ ಕೆ‌ಎಸ್‌ಆರ್‌ಟಿಸಿ ಕುಂದಾಪುರ ಘಟಕದ ಮುಖ್ಯಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಕುಂದಾಪುರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಠಾಣಾಧಿಕಾರಿ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.

ಟಿಪ್ಪರ್‌ ಚಾಲಕನಿಂದ ಪರವಾನಿಗೆ ಉಲ್ಲಂಘನೆ:

ಟಿಪ್ಪರ್‌ ಚಾಲಕ ರಾಘವೇಂದ್ರ ಮಣ್ಣು ಸಾಗಾಟದ ಪರವಾನಿಗೆ ನಿಯಮ ಉಲ್ಲಂಘಿಸಿ ಮಿತಿ ಮೀರಿದ ಕೆಂಪು ಮಣ್ಣು  ತುಂಬಿಸಿಕೊಂಡು ಕಿರಿದಾದ ರಸ್ತೆಯಲ್ಲಿ ಚಲಾಯಿಸಿದ್ದಾನೆ. ವಾಹನ ಅಪಘಾತವಾಗಿ ಎದುರುನಿಂದ ಬರುವ ವಾಹನಗಳಿಗೆ ಅಪಘಾತವಾಗಿ ಸಾವು ನೋವು ಉಂಟಾಗುವ ಸಾಧ್ಯತೆ ಇದೆ ಎನ್ನುವ ಅರಿವಿದ್ದರೂ ಕೂಡ ಟಿಪ್ಪರ್ ಚಾಲಕ ರಾಘವೇಂದ್ರ ವಾಹನ ಪರವಾನಿಗೆ (ಯಾವುದೇ ದಾಖಲೆಗಳನ್ನು ವಿಮಾ ಪತ್ರ (ಇನ್ಸೂರೆನ್ಸ್), ಪರವಾನಿಗೆ ) ಉಲ್ಲಂಘಿಸಿ ಅಪಘಾತಕ್ಕೆ ಕಾರಣವಾಗಿದ್ದಾನೆ  ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಂಜುನಾಥ್ ಎಂಬುವರ ತಾಯಿಯ ಜಾಗದಿಂದ ಭೂಮಿ ಸಮತಟ್ಟು ಮಾಡಲೆಂದು ಶ್ರೀಧರ ಎಂಬಾತನಿಗೆ ಗುತ್ತಿಗೆ ನೀಡಲಾಗಿತ್ತು. ಅದರಂತೆ ಶ್ರೀಧರ್ ತನ್ನ ತಾಯಿಯ ಹೆಸರಿನಲ್ಲಿ ಖರೀದಿಸಿರುವ ಟಿಪ್ಪರ್ ನಲ್ಲಿ ತಮತಟ್ಟುಗೊಳಿಸಿದ ಮಣ್ಣನ್ನು ಚಾಲಕ ರಾಘವೇಂದ್ರನಿಗೆ ಮಾರಿದ್ದು, ರಾಘವೇಂದ್ರ ಬೇಗನೇ ಮಣ್ಣು ಖಾಲಿ ಮಾಡಿಸುವ ಉದ್ದೇಶದಿಂದ ಅವಸರವಾಗಿ, ನಿಯಂತ್ರಣ ಇಲ್ಲದೇ ವಾಹನ ಚಲಾಯಿಸಿದ್ದ. ರಾಘವೇಂದ್ರ ಕುಡುಕನಾಗಿದ್ದು, ವಾಹನ ಚಲಾಯಿಸುವಾಗ ಡ್ರಿಂಕ್ಸ್ ಮಾಡುತ್ತಿದ್ದ ಎನ್ನಲಾಗಿದೆ. 

ಇಬ್ಬರು ವಿದ್ಯಾರ್ಥಿನಿಯರು ತೀವ್ರ ನಿಗಾ ಘಟಕದಲ್ಲಿ: 

ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಒಬ್ಬ ವಿದ್ಯಾರ್ಥಿಯು ಚೇತರಿಸಿಕೊಳ್ಳುತ್ತಿದ್ದು ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರನ್ನು ಮಣಿಪಾಲದ ತೀವ್ರ ನಿಗಾ ಘಟಕದಲ್ಲಿರಿಸಿ 48 ಗಂಟೆಗಳ ಕಾಲ ನಿಗಾದಲ್ಲಿರಿಸಲಾಗಿದೆ (ಅಬ್ಸರ್‌ವೇಶನ್) ಎಂದು ಕೆಎಂಸಿ ವೈದ್ಯಕೀಯ ಮೂಲಗಳು ತಿಳಿಸಿದೆ.

ಅಪಘಾತ ನಡೆದು ಜನಾಕ್ರೋಶ ಹೊರಹೊಮ್ಮಿದಾಗ ಓಡಾಡುತ್ತಿದ್ದ ಟಿಪ್ಪರ್ ಮಾಲಕನ ಹೆಸರು ಎಫ್ಐಆರ್ ಆದಾಗ ಬದಲಾಗಿದ್ದು ಹೇಗೆ? ದಾಖಲೆ ಪತ್ರಗಳೇ ಸರಿಯಾಗಿಲ್ಲದ ಸುಮಾರು ಎಂಭತ್ತು‌ವರ್ಷ ಮೇಲ್ಪಟ್ಟ ವೃದ್ಧೆಯರ ಮಾಲೀಕತ್ವದ ಟಿಪ್ಪರ್ ವಾಹನ ಅಪಘಾತವಾದಾಗ ಟಿಪ್ಪರ್ ಮಾಲಕರ ಮಕ್ಕಳ ಮೇಲೆ ಮಾತ್ರ ಎಫ್ಐರ್ ಮಾಡಿದರೆ ಕಾನೂನಿಡಿಯಲ್ಲಿ ಸಂತ್ರಸ್ಥರಿಗೆ‌ ನ್ಯಾಯ ದೊರಕುವುದು ಸಾಧ್ಯವೇ? ನಿಯಮ ಉಲ್ಲಂಘಿಸಿ, ಅಕ್ರಮ ದಂಧೆ ಮಾಡುವವರಿಗೆ, ಕುಡಿದು ಟಿಪ್ಪರ್ ಚಲಾಯಿಸುವವರಿಗೆ, ಕರ್ಕಶ ಹಾರ್ನ್ ಬಳಸುವ ವಾಹನ ಚಾಲಕರ ಪರ‌ ಮೃಧುಧೋರಣೆ ಸರಿಯೇ? ಎನ್ನುವ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ‌ಕಾರಣವಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!