ಶೆಟ್ರಕಟ್ಟೆಯಲ್ಲಿ ಸರ್ಕಾರೀ ಬಸ್ ಹಾಗೂ ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ಮೂವರು ವಿದ್ಯಾರ್ಥಿನಿಯರು ಗಂಭೀರ!

ಕುಂದಾಪುರ: ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಅತೀ ವೇಗದಲ್ಲಿ ಬಂದು ಸರ್ಕಾರೀ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿಗಳು ಸೇರಿದಂತೆ ಹದಿನೆಂಟು ಮಂದಿ ಗಂಭೀರ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲ್ಪಟ್ಟ ಘಟನೆ ಸೋಮವಾರ ಸಂಜೆ ತಲ್ಲೂರು ನೇರಳಕಟ್ಟೆ ರಸ್ತೆಯ ಶೆಟ್ರಕಟ್ಟೆ ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ಕುಂದಾಪುರದಿಂದ ಆಜ್ರಿ ಮಾರ್ಗವಾಗಿ ಸರ್ಕಾರಿ ಬಸ್ಸು ಪ್ರಯಾಣಿಸುತ್ತಿತ್ತು. ಬಸ್ಸಿನಲ್ಲಿ ಬಹುತೇಕ ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದರು. ಶೆಟ್ರಕಟ್ಟೆ ಪೆಟ್ರೋಲ್ ಬಂಕ್ ಸಮೀಪ ಬರುತ್ತಿದ್ದಂತೆ ಎದುರುಗಡೆಯಿಂದ ಬಂದ ರಾಘವೇಂದ್ರ ತೀರ್ಥಹಳ್ಳಿ ಎಂಬಾತ ಚಲಾಯಿಸುತ್ತಿದ್ದ ಮಣ್ಣು ಸಾಗಾಟದ ಟಿಪ್ಪರ್ ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಒಬ್ಬ ವಿದ್ಯಾರ್ಥಿನಿ ಬಸ್ಸಿನಿಂದ ಹಾರಿ ರಸ್ತೆಗೆ ಬಿದ್ದಿದ್ದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದ್ದು, ಆ ಪೈಕಿ ಇಬ್ಬರಿಗೆ ತಲೆಗೆ ತೀವ್ರತರವಾದ ಪೆಟ್ಟಾಗಿದೆ. ತಲೆಗೆ ಗಂಭೀರ ಗಾಯಗಳಾದ ವಿದ್ಯಾರ್ಥಿನಿಯರನ್ನು ಆಜ್ರಿ ನಿವಾಸಿಗಳಾದ ಅರ್ಚನಾ ಹಾಗೂ ಚೈತ್ರಾ ಎಂದು ಗುರುತಿಸಲಾಗಿದ್ದರೆ, ಮತ್ತೊಬ್ಬ ವಿದ್ಯಾರ್ಥಿನಿಯನ್ನು ಶಾರದಾ ಎಂದು ಗುರುತಿಸಿಲಾಗಿದೆ. ಉಳಿದಂತೆ ಹದಿನೈದು ಮಂದಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಬಸ್ಸಿನ ಬಲಭಾಗ ನುಜ್ಜುಗುಜ್ಜಾಗಿದೆ. ಬಸ್ಸಿನಲ್ಲಿ ಬಹುತೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು.

ತಕ್ಷಣ ಸ್ಪಂದಿಸಿದ ಸ್ಥಳೀಯರು ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಟಿಪ್ಪರ್ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನುವುದು ಸಿಸಿಟಿವಿ ದಾಖಲೆಯಲ್ಲಿ ಕಂಡು ಬರುತ್ತಿದೆ. ಟಿಪ್ಪರ್ ನಾಗರಾಜ ಬಳ್ಕೂರು ಎಂಬಾತನಿಗೆ ಸೇರಿದೆ.. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಅಕ್ರಮ ಮಣ್ಣು, ಕಲ್ಲು, ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಟಿಪ್ಪರ್ ಗಳ ವೇಗಕ್ಕೆ ನಿಯಂತ್ರಣವಿಲ್ಲದಂತಾಗಿದೆ. ಜಿಲ್ಲಾಡಳಿತ ಹಲವಾರು ಪ್ರತಿಭಟನೆಗಳ ಬಳಿಕವೂ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ. ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿದ್ದಾರೆ.

