ಕುಮಾರಿ ರಿಷಿಕಾಗೆ “ವಿದ್ಯಾರ್ಥಿ ಯುವ ಸಾಹಿತ್ಯ ರತ್ನ” ಪ್ರಶಸ್ತಿ
ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರಿ ರಿಷಿಕಾ ಆರ್ ದೇವಾಡಿಗ ಅವರಿಗೆ ಅವರ ಸಾಹಿತ್ಯ ಸಾಧನೆಯನ್ನು ಗುರುತಿಸಿ “ವಿದ್ಯಾರ್ಥಿ ಯುವ ಸಾಹಿತ್ಯ ರತ್ನ” ಪ್ರಶಸ್ತಿ ಲಭಿಸಿದೆ.

ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ 21ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಟ್ಟೆ ಸಂಸ್ಥೆಯ ನಿರ್ದೇಶಕ ಯೋಗೇಶ್ ಹೆಗಡೆ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.
ಸಮಾರಂಭದ ಸರ್ವಾಧ್ಯಕ್ಷತೆವಹಿಸಿದ್ದ ಸಾಹಿತಿ ಸಿದ್ದಾಪುರ ವಸುದೇವ ಭಟ್, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಕೊಂಡಳ್ಳಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರುಗಳು, ಶಿಕ್ಷಕಿ ರೂಪಾ ದೇವಾಡಿಗ ಹಾಗೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಖ್ಯಾತ ಕನ್ನಡ ಸಾಹಿತಿ, ಚುಟುಕು ಬ್ರಹ್ಮ ಖ್ಯಾತಿಯ ಹೆಚ್ ದುಂಡಿರಾಜ್ ಅವರು ರಿಷಿಕಾ ಬರೆದ ಮೊದಲ ಪುಸ್ತಕ ‘ಮೊದಲ ಹೆಜ್ಜೆ’ ಕುರಿತು ಮಾತನಾಡಿ, ಮೆಚ್ಚುಗೆಯ ಮಾತುಗಳನ್ನಾಡಿ, “ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಟ್ಟಿರುವುದು ಅಪರೂಪದ ಸಾಧನೆ” ಎಂದರು.
ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ, ಕನ್ನಡ ಸಾಹಿತ್ಯಾಸಕ್ತರು, ಸಾಹಿತಿಗಳು ಹಾಗೂ ವಿದ್ಯಾರ್ಥಿ ಸಾಹಿತಿಗಳು ಭಾಗವಹಿಸಿದ್ದರು.
