ಕೋಟ: ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಮನವಿ
ಕುಂದಾಪುರ: ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2012ರಿಂದ 2025ರ ವರೆಗಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಣದ ಅವ್ಯವಹಾರ ಮತ್ತು ಅಕ್ರಮಗಳನ್ನು ಎಸಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ವಡ್ಡರ್ಸೆ ಗ್ರಾಮಸ್ಥರು ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಕೋಟ ಹೋಬಳಿಯ ವಡ್ಡರ್ಸೆ ಗ್ರಾಮದ (ವಡ್ಡರಸನ ಕಾಲದಲ್ಲಿ) ಇತಿಹಾಸ ಪ್ರಸಿದ್ದ ದೇವಸ್ಥಾನಗಳಲ್ಲಿ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಒಂದಾಗಿದ್ದು, ಕರ್ನಾಟಕ ಸರ್ಕಾರದ ಧಾರ್ಮಿಕ ಇಲಾಖೆಗೆ ಒಳಪಟ್ಟ ಮುಜರಾಯಿ ಇಲಾಖೆಯ “ಸಿ” ದರ್ಜೆಯ ದೇವಸ್ಥಾನವಾಗಿದೆ.

ಇಲ್ಲಿ 2012ರಿಂದ 2025ರವರೆಗೆ ಸುಮಾರು 13 ವರ್ಷಗಳಿಂದ ಏಕ ಪಕ್ಷೀಯವಾದ ನಿರ್ಣಯಗಳ ಜೊತೆಗೆ ಆಡಳಿತ ಮಂಡಳಿಯ ಇನ್ನಿತರ ಸದಸ್ಯರನ್ನು ಗಮನಕ್ಕೆ ತರದೆ, ದೇವಸ್ಥಾನದ ಅಭಿವೃದ್ಧಿಯ ಹೆಸರಲ್ಲಿ ದಾನಿಗಳಿಗೆ, ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ಅವರ ಕಾನೂನು ಬದ್ದ 3 ವರ್ಷ ಆಡಳಿತಾವಧಿ ಹಾಗೂ ಕಾನೂನುಬಾಹಿರ 10 ವರ್ಷಗಳ ಅವಧಿ ಒಟ್ಟು 13 ವರ್ಷಗಳಲ್ಲಿ ದೇವಸ್ಥಾನದ ಅಭಿವೃದ್ಧಿಯ ಹೆಸರಲ್ಲಿ ಅನೇಕ ಕಾಮಗಾರಿಗಳು ನಡೆದಿದ್ದು, ಮುಕ್ತೇಶ್ವರ (ಅಧ್ಯಕ್ಷರ) ಒಬ್ಬರ ನಿರ್ಣಯದ ಮೂಲಕವೇ ನಡೆದಿದ್ದು, ಈ ಕಾಮಗಾರಿಗಳಿಗೆ ಸರ್ಕಾರ ಹಾಗೂ ದಾನಿಗಳಿಂದ ಪಡೆದ ಸಹಾಯಧನವನ್ನು ಪಡೆದು ಯಾವುದೇ ಸರಿಯಾದ ದಾಖಲೆಗಳಿಲ್ಲದೇ ಅವ್ಯವಹಾರ ನಡೆಸಿರುವ ಸಾಧ್ಯತೆಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2012ರಿಂದ 2025ರವರೆಗಿನ ದೇವಸ್ಥಾನದಲ್ಲಿನ ಚಿನ್ನ, ಬೆಳ್ಳಿ. ಹಾಗೂ ಬೆಲೆ ಬಾಳುವ ವಸ್ತುಗಳ ವಿವರಗಳನ್ನು ಸರಿಯಾಗಿ ದಾಖಲಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ ದೇವಸ್ಥಾನದ ಭಕ್ತರಿಗೆ ಮತ್ತು ಗ್ರಾಮಸ್ಥರಿಗೆ ಹಾಗೂ ದಾನಿಗಳಿಗೆ ನ್ಯಾಯ ಒದಗಿಸಿಕೊಡಬೇಕು. ಸಮಗ್ರ ತನಿಖೆ ಪೂರ್ಣಗೊಳ್ಳುವವರೆಗೆ ಹೊಸ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಸಹಾಯಕ ಆಯುಕ್ತರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
