ಕೋಟದಲ್ಲಿ ಕನ್ನಡ ರಾಜ್ಯೋತ್ಸವ – ನಾಡು ನುಡಿಯ ಬಗ್ಗೆ ಕಾಳಜಿ ವಹಿಸಿ

ಕುಂದಾಪುರ: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ 28ನೇ ವರ್ಷ ಸದ್ಭಾವನಾ ನಾಡುನುಡಿಗೆ ಭಾವ ನಮನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾತನಾಡಿದ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಕುಮಾರ್, ಕನ್ನಡ ನಾಡು ನುಡಿಯ ಬಗ್ಗೆ ವಿಶೇಷ ಕಾಳಜಿವಹಿಸುವಂತೆ ಕರೆ ನೀಡಿದರು. ಬೇರೆ ಭಾಷೆಗಳನ್ನು ಗೌರವಿಸುವುದರ ಜತೆಗೆ ಮಾತೃ ಭಾಷೆಗೆ ವಿಶೇಷ ಆಸಕ್ತಿ ತೋರಬೇಕು, ನಮ್ಮ ಭಾಷೆ ಮನೆ ಮನಗಳಲ್ಲಿ ನಿತ್ಯ ನಿರಂತರವಾಗಿಸಿಸಲು ಸಲಹೆ ನೀಡಿದ ಅವರು, ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳ ಉಳಿಸುವ ಕಾರ್ಯದಲ್ಲಿ ಕನ್ನಡ ಸಂಘಟನೆಗಳು ಕೈಜೋಡಿಸಬೇಕಿದೆ ಪಂಚವರ್ಣ ಸಂಘಟನೆ ಕ್ರೀಯಾಶೀಲ ಸಂಘಟನೆಯಾಗಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಸುತ್ತಿದೆ ಎಂದರು.

ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು. ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ಕನ್ನಡ ಧ್ವಜವನ್ನು ಅರಳಿಸಿ ಭುವನೇಶ್ವರಿಗೆ ಪುಷ್ಭ ನಮನ ಸಲ್ಲಿಸಿದರು. ಸಾಮಾಜಿಕ ಸೇವೆ ಗೈಯುತ್ತಿರುವ ಕೋಟದ ಹರ್ತಟ್ಟು ಮಂಜುನಾಥ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ ಕೋಟ, ಪರಿಸರವಾದಿ ಕೋ.ಗಿ.ನಾ ,ಪಂಚವರ್ಣ ಯುವಕಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ,ಸನ್ಮಾನ ಪತ್ರವನ್ನು ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ.ಹಂದಟ್ಟು ವಾಚಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ಯ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮ ಸಂಯೋಜಿಸಿದರು.
