ಕಾರ್ಕಳ: ತಲ್ವಾರ್ ತೋರಿಸಿ ದನಕಳವು – ತಲ್ವಾರ್, ವಾಹನ ಸಹಿತ ಮೂವರು ಆರೋಪಿಗಳ ಬಂಧನ
ಕಾರ್ಕಳ : ಸೆಪ್ಟಂಬರ್ 28ರಂದು ರಾತ್ರಿ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಜಯಶ್ರೀ ಎನ್ನುವವರ ಮನೆಯ ದನದ ಕೊಟ್ಟಿಗೆಗೆ ಮೂವರು ಅಪರಿಚಿತ ವ್ಯಕ್ತಿಗಳು ತಲವಾರುಗಳೊಂದಿಗೆ ನುಗ್ಗಿ, ತಲವಾರು ತೋರಿಸಿ ಬೆದರಿಸಿ, ಕೊಟ್ಟಿಗೆಯಲ್ಲಿದ್ದ ಸುಮಾರು ಮೂತ್ತೈದು ಸಾವಿರ ರೂಪಾಯಿ ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೃತ್ಯಕ್ಕೆ ಬಳಸಿದ್ದರೆನ್ನಲಾದ ಎರಡು ವಾಹನಗಳ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಬೋರ್ಕಟ್ಟೆ ದಡ್ಡಕಜೆ ನಿವಾಸಿ ಮೊಹಮ್ಮದ್ ಎಂಬುವರ ಮಗ ಮೊಹಮ್ಮದ್ ಯೂನಿಸ್ ಯಾನೆ ಯೂನಿಸ್ ಯಾನೆ ಯೂನಸ್ (31), ಮೂಡುಬಿದ್ರೆ ತಾಲೂಕು ಕಲ್ಲಬೆಟ್ಟು ಗ್ರಾಮ ನೀರಲ್ಕೆ ಹೌಸ್ ನಿವಾಸಿ ಇಸುಬು ಎಂಬಾತನ ಮಗ ಮೊಹಮ್ಮದ್ ನಾಸೀರ್ ಯಾನೆ ನಾಸೀರ್ (28) ಹಾಗೂ ಮೂಡಬಿದ್ರೆ ತಾಲೂಕು ಪುತ್ತಿಗೆ ಗ್ರಾಮ ಮಿಜಾರು ಹಂಡೇಲು ಮನೆ ವಾಸಿ ಉಮ್ಮರಬ್ಬ ಎಂಬಾತನ ಮಗ ಮೊಹಮ್ಮದ್ ಇಕ್ಬಾಲ್ ಯಾನೇ ಇಕ್ಕು (29) ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿಯಾದ ಮಂಜಪ್ಪ ಡಿ.ಆರ್ ರವರು ಅಜೆಕಾರು ಠಾಣಾ ಪಿ.ಎಸ್.ಐ ರವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು. ಪೊಲೀಸರು ಆಪಾದಿತರ ವಶದಲ್ಲಿದ್ದ ಕೃತ್ಯಕ್ಕೆ ಬಳಸಿದ್ದ 2 ತಲವಾರು, ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ, ಕೃತ್ಯದ ಸಮಯ ಉಪಯೋಗಿಸಿದ್ದ 5 ಮೊಬೈಲ್ ಫೋನ್ ಗಳು ಸೇರಿದಂತೆ ಸುಮಾರು ಐದು ಲಕ್ಷದ ಎಂಬತ್ತೇಳು ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಜೆಕಾರು ಪೊಲೀಸ್ ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಮ್, ಸಿಬ್ಬಂದಿಯವರಾದ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ. ಹೆಬ್ರಿ ಠಾಣಾ ಸಿಬ್ಬಂದಿ ಸುಜೀತ್ ಕುಮಾರ್, ಕಾರ್ಕಳ ಗ್ರಾಮಾಂತರ ಠಾಣೆಯ ಮಹಾಂತೇಶ್ ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ವಿಶ್ವನಾಥ ಮತ್ತು ಶಶಿಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.