ಕೊಲ್ಲೂರು : ಮೂಕಾಂಬಿಕೆ ದೇವಿಯ ಸನ್ನಿಧಾನದಲ್ಲಿ ನವರಾತ್ರಿ ಮತ್ತು ವಿಜಯ ದಶಮಿ ಸಂಪನ್ನ

ಕುಂದಾಪುರ: ಜಗತ್ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಬುಧವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ವೈಭವದ ರಥೋತ್ಸವ ಸಂಪನ್ನಗೊಂಡಿತು. ಸೆಪ್ಟಂಬರ್ 22ರಿಂದ ಮಹಾನವಮಿಯ ತನಕವೂ ನಡೆದ ನವರಾತ್ರಿ ಸಂಭ್ರಮದ ಜೊತೆಗೆ ಬುಧವಾರ ಮಧ್ಯಾಹ್ನ ತಂತ್ರಿ ನಿತ್ಯಾನಂದ ಅಡಿಗರ ಅವರ ನೇತೃತ್ವದಲ್ಲಿ ಚಂಡಿಕಾ ಹೋಮ, ನವರಾತ್ರಿ ಕಟ್ಟು ಕಟ್ಟಳೆ ಪೂಜೆ, ಸುಮಂಗಲಿಯರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿಗಳ ಬಳಿಕ ದೇಗುಲದ ಗರ್ಭಗುಡಿಯಿಂದ ಮೂರ್ತಿಧಾರಕ ಕಾಳಿದಾಸ್ ಭಟ್ ಅವರು ಶ್ರೀ ಮೂಕಾಂಬಿಕೆಯ ಉತ್ಸವ ಮೂರ್ತಿಯನ್ನು ದೇಗುಲದಿಂದ ಹೊರ ಆವರಣಕ್ಕೆ ತಂದು ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ, ಮುಹೂರ್ತ ಬಲಿ, ಓಡು ಬಲಿ ಸೇವೆ ನಡೆಸಿದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.

ರಥ ಪೂಜೆ ನಡೆಸಿದ್ದ ತಂತ್ರಿಗಳು, ಶ್ರೀದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ಸೇರಿದ್ದ ಸಾವಿರಾರು ಭಕ್ತರು ಶ್ರೀ ದೇವಿಗೆ ಜಯ ಘೋಷವನ್ನು ಹಾಕುತ್ತಾ ರಥವನ್ನು ಎಳೆದರು. ಪಂಚ ವಾದ್ಯಗಳು, ಪಾರಂಪರಿಕ ವಾದ್ಯಗಳು, ಕೇರಳದ ಚೆಂಡೆ ತಂಡಗಳು ಭಾಗವಹಿಸಿದ್ದವು. ಬಳಿಕ ಉತ್ಸವ ಮೂರ್ತಿಯನ್ನು ಮರಳಿ ಗರ್ಭಗುಡಿಗೆ ಕೊಂಡೊಯ್ಯಲಾಯಿತು.

ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಉತ್ಸವದ ಕಾರಣಕ್ಕಾಗಿ ಬೆಳಿಗ್ಗೆ 3 ಗಂಟೆಯಿಂದಲೇ ಪೂಜಾ ವಿಧಿಗಳನ್ನು ಆರಂಭಿಸಲಾಗಿತ್ತು ಮುಂಜಾನೆ 5 ಗಂಟೆಯಿಂದ ಆರಂಭವಾದ ಶ್ರೀದೇವಿಯ ದರ್ಶನಕ್ಕಾಗಿ ಭಕ್ತರು ರಾತ್ರಿ 10 ಗಂಟೆಯವರೆಗೆ ಸರದಿ ಸಾಲಿನಲ್ಲಿ ನಿಂತಿದ್ದರು. ಅಂದಾಜು 20,000 ಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದುಕೊಂಡಿದ್ದರು.

ನಾಣ್ಯ ಎಸೆಯುವ ಪದ್ದತಿಗೆ ಬ್ರೇಕ್: ರಥೋತ್ಸವದ ಸಂದರ್ಭದಲ್ಲಿ ಎಸೆಯುವ ನಾಣ್ಯಗಳು ಪಡೆದುಕೊಂಡರೆ ಐಶ್ವರ್ಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಲ್ಲಿ, ದೇವಸ್ಥಾನದ ಪ್ರಾಂಗಣದಲ್ಲಿ ಭಾರಿ ಪ್ರಮಾಣದಲ್ಲಿ ಭಕ್ತಸ್ತೋಮ ಸೇರುತ್ತಿತ್ತು. ಇದರಿಂದ ಉಂಟಾಗುತ್ತಿದ್ದ ನೂಕುನುಗ್ಗಲು ನಿಯಂತ್ರಣಕ್ಕೆ ಈ ಬಾರೀ ನಾಣ್ಯ ಎಸೆಯುವ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರ ಅಭಿಪ್ರಾಯ ಪಡೆದು ರಥದ ಮೇಲಿನಿಂದ ನಾಣ್ಯ ಎಸೆಯುವ ಕ್ರಮವನ್ನು ಕೈಬಿಟ್ಟು ಶ್ರೀದೇವಿ ದರ್ಶನ ಪಡೆದ ಪ್ರತಿ ಭಕ್ತರಿಗೂ ಪ್ರಸಾದ ರೂಪದಲ್ಲಿ ನಾಣ್ಯ ವಿತರಣೆ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಾಗಿದೆ. ಇದರಿಂದ ಎಲ್ಲಾ ಭಕ್ತರೂ ನಾಣ್ಯ ಪ್ರಸಾದ ಪಡೆದುಕೊಂಡು ಧನ್ಯತೆ ಅನುಭವಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯರಾದ ಪಿ.ವಿ.ಅಭಿಲಾಶ್, ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ರಾಜೇಶ್ ಕಾರಂತ್, ಸುರೇಂದ್ರ ಶೆಟ್ಟಿ, ಧನಾಕ್ಷೀ ಪೂಜಾರಿ, ಸುಧಾ ಬೈಂದೂರು, ಶಾಸಕರಾದ ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅಯಚ್ ತುಂಬಿಗೆ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್, ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ, ಮೂರ್ತಿ ಕಾಳಿದಾಸ್ ಭಟ್, ಕೆ.ಎನ್.ಸುಬ್ರಮಣ್ಯ ಅಡಿಗ, ವಿಘ್ನೇಶ್ ಅಡಿಗ, ಸುರೇಶ್ ಭಟ್, ಸತ್ಯನಾರಾಯಣ ಅಡಿಗ, ಶ್ರೀಶ ಭಟ್, ಅಪ್ಪಣ್ಣ ಭಟ್, ಗಜಾನನ ಜೋಯಿಸ್, ಪ್ರಮುಖರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ಮೋಹನ್‌ಚಂದ್ರ ನಂಬಿಯಾರ್, ರತ್ನಾ ರಮೇಶ್ ಕುಂದರ್, ರಮೇಶ್ ಗಾಣಿಗ ಕೊಲ್ಲೂರು, ಕಿಶೋರ್ ಹೆಗ್ಡೆ, ಬೇಳೂರು ರಾಘವೇಂದ್ರ ಶೆಟ್ಟಿ, ಶರತ್‌ಕುಮಾರ್ ಶೆಟ್ಟಿ ಉಪ್ಪುಂದ, ರೋಹಿತ್ ಕುಮಾರ್ ಶೆಟ್ಟಿ ಸಿದ್ದಾಪುರ, ದಿನೇಶ್ ಶೆಟ್ಟಿ ಬೇಳೂರು ಮುಂತಾದವರಿದ್ದರು.

ಎಸ್.ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ ಸುಧಾಕರ ನಾಯ್ಕ್ ಡಿವೈಎಸ್‌ಪಿ ಹೆಚ್.ಡಿ.ಕುಲಕರ್ಣಿ, ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಹೋಂ ಗಾರ್ಡ್ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ವೃತ್ತ ನಿರೀಕ್ಷಕರಾದ ಜಯರಾಮ್ ಗೌಡ, ನಿಲೇಶ್ ಚೌಹಾಣ್, ಉಪನಿರೀಕ್ಷಕರುಗಳಾದ ವಿನಯ್ ಕೊರ್ಲಹಳ್ಳಿ, ತಿಮ್ಮೇಶ್, ಯೂನಸ್ ಗಡ್ಡೇಕರ್, ಸುಧಾರಾಣಿ, ಚಂದ್ರಕಲಾ ಪತ್ತರ್, ನವೀನ್ ಬೋರ್ಕರ್ ಇದ್ದರು.





ಗುರುವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 3 ಗಂಟೆಯಿಂದ ಪುಟಾಣಿಗಳಿಗೆ ದೇವಸ್ಥಾನದ ಋತ್ವೀಜರ ಮೂಲಕ ವಿದ್ಯಾರಂಭಕ್ಕಾಗಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಹಿರಿಯ ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ ನೇತೃತ್ವದಲ್ಲಿ ಕದಿರು ಹಬ್ಬದ ಆಚರಣೆ ನಡೆಯಿತು. ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು.

ಮಹಾನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ಈ ಬಾರಿ 6 ಸಾವಿರಕ್ಕೂ ಅಧಿಕ ಮಹಿಳಾ ಭಕ್ತರು ಸೀರೆ ಪ್ರಸಾದ ಪಡೆದರು. ಬೆಂಗಳೂರಿನ ಉದ್ಯಮಿ ಮಹೇಶ್ ಆಚಾರ್ಯ ಅವರು ಗುರುವಾರ ದೇಗುಲದಲ್ಲಿ ವಿಶೇಷ ಭಕ್ಷ್ಯ ಗಳೊಂದಿಗೆ ಅನ್ನದಾನ ಸೇವೆ ಹಾಗೂ ಫಲಹಾರ ಸೇವೆ ಸಮರ್ಪಿಸಿದರು. 6 ಸಾವಿರಕ್ಕೂ ಅಧಿಕ ಮಂದಿ ದಾಸೋಹ ಸೇವೆಯನ್ನು ಸ್ವೀಕರಿಸಿದ್ದಾರೆ

ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕಲಾ ತಂಡಗಳು ಹಾಗೂ ಕಲಾವಿದರು, ಸ್ವರ್ಣಮುಖಿ ರಂಗಮಂಟಪದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು.

ಐತಿಹಾಸಿಕ ಕೊಲ್ಲೂರು ಶ್ರೀ ಮೂಕಮಬಿಕೆ ಸನ್ನಿಧಿಯಲ್ಲಿ ನಡೆದ ಮಹಾನವರಾತ್ರಿಯ ರಥೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಹಾಗೂ ನೂಕುನುಗ್ಗಲು ಆಗದಂತೆ ಪೊಲೀಸ್ ಇಲಾಖೆ ತೆಗೆದುಕೊಂಡ ಕ್ರಮಗಳು ವ್ಯಾಪಕ ಪ್ರಶಂಸೆಗೊಳಗಾಗಿದೆ. ಭಕ್ತರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು ಎಲ್ಲರ ಸಹಕಾರದಿಂದ ನವರಾತ್ರಿ, ವಿಜಯದಶಮಿ ಸಹಿತ ಎಲ್ಲಾ ವಿಧಿವಿಧಾನಗಳು ಸಂಪನ್ನಗೊಂಡಿವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ ಹೇಳಿದ್ದಾರೆ. ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.