ಕೋಟ: ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ಮನೆಗೆ ಪ್ರಾಣಿದಯಾ ಸಂಘ ವ್ಯಾಪಕ ಪರಿಶೀಲನೆ, ಆಕ್ರೋಶ
ಕುಂದಾಪುರ: ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾಡು ಪ್ರಾಣಿಗಳನ್ನು ಇರಿಸಲಾಗಿದೆ ಎಂಬ ಆರೋಪದಡಿ ಸಾಲಿಗ್ರಾಮದ ಸುಧೀಂದ್ರ ಐತಾಳ್ ಇವರ ಮನೆಗೆ ಜಿಲ್ಲಾ ಪ್ರಾಣಿದಯಾ ಸಂಘದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಸಮ್ಮುಖದಲ್ಲಿ ಬ್ರಹ್ಮಾವರ ಪಶು ಪಾಲನಾ ಇಲಾಖಾಧಿಕಾರಿ ಡಾ.ಉದಯ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಸ್ಥಳ ಪರಿಶೀಲನೆ ಮತ್ತು ಮಹಜರು ನಡೆಸಲಾಯಿತು.

ಈ ವೇಳೆ ಸ್ಥಳದಲ್ಲಿದ್ದ ಸಾಕು ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಾಲೂಕು ಪಶುಪಾಲನಾ ಇಲಾಖೆ, ವನ್ಯಜೀವಿ ವಿಭಾಗ ಬ್ರಹ್ಮಾವರ, ಸಾಲಿಗ್ರಾಮ ಪಟ್ಟಣಪಂಚಾಯತ್, ಪ್ರಾಣಿದಯಾ ಸಂಘ ಉಡುಪಿ, ಕೋಟ ಪೊಲೀಸರು ಉಪಸ್ಥಿತರಿದ್ದರು.

ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಪ್ರಾಣಿಪ್ರೇಮಿ ಸುಧೀಂದ್ರ ಐತಾಳ್ ಸ್ಥಳ ಮಹಜರು ನಡೆಸುತ್ತಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ನನ್ನ ಬಳಿ ಈವರೆಗೆ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಗಾಯಗೊಂಡ ಪ್ರಾಣಿಗಳನ್ನು ತಂದು ಬಿಡುತ್ತಿದ್ದು ಸಮಯೋಚಿತವಾಗಿ ಅದಕ್ಕೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದೇನೆ. ಆದರೆ ಈ ರೀತಿ ಪ್ರತಿ ಬಾರಿ ನಮ್ಮ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ,ಈಗಾಗಲೇ ಪೇಟಾ ನನ್ನಲ್ಲಿರುವ 10ಲಕ್ಷ ಮೌಲ್ಯದ ಪ್ರಾಣಿ ಪಕ್ಷಿಗಳನ್ನು ಕೊಂಡ್ಯೊಯ್ದಿದೆ,ಇನ್ನು ಮುಂದೆ ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಅವರೇ ಚಿಕಿತ್ಸೆ ನೀಡಲಿ, ಬೀದಿನಾಯಿಗಳನ್ನು ಸಂಬಂಧಿಸಿದ ಪಟ್ಟಣಪಂಚಾಯತ್ ಹಾಗೂ ಪಶು ಆಸ್ಪತ್ರೆಯಲ್ಲಿ, ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬಿಟ್ಟುಬಿಡಿ ಎಂದು ಆಕ್ರೋಶ ಹೊರಹಾಕಿದರು.

ಸುಧೀಂದ್ರ ಐತಾಳ್‌ರವರನ್ನು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ ಪ್ರಾಣಿ ಆರೈಕೆ ಮಾಡುವ ವ್ಯಕ್ತಿಗೆ ಈ ರೀತಿ ಹಿಂಸೆ ನೀಡುವುದು ಸರಿಯಲ್ಲ ಈ ಬಗ್ಗೆ ಕೋರ್ಟ್ ಮೂಲಕ ನ್ಯಾಯಕ್ಕೆ ಮೊರೆಹೋಗುವುದಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಎಚ್ಚರಿಸಿದರು. ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಅತಿಯಾಗಿದ್ದು ಇನ್ನು ಮುಂದೆ ನಿಮ್ಮ ಪಟ್ಟಣಪಂಚಾಯತ್ ಬಳಿ ಬಿಡುತ್ತೇವೆ. ನೀವೆ ಆರೈಕೆ ಮಾಡಿ ಪ್ರಸ್ತುತ ಐತಾಳರ ಮೇಲೆ ಈ ರೀತಿ ಮಾನಸಿಕ ಹಿಂಸೆ ಸರಿಯಲ್ಲ ಎಂದರು. ಈ ಸಂದರ್ಭ ಜಿಲ್ಲಾ ಪ್ರಾಣಿದಯಾ ಸಂಘ ಪದಾಧಿಕಾರಿಗಳು, ಪಶು ಇಲಾಖೆ,ಸಾಲಿಗ್ರಾಮ ಪಟ್ಟಣಪಂಚಾಯತ್ ,ಕೋಟ ಆರಕ್ಷಕರು ಸೇರಿದಂತೆ ಗ್ರಾಮಸ್ಥರು ಸ್ಥಳದಲ್ಲಿ ಇದ್ದರು.