ಕುಂದಾಪುರ: ಕೊಂಕಣ ರೈಲು ವಿಲೀನಕ್ಕೆ ಸಕಲ ಸಿದ್ಧತೆ – ರೈಲ್ವೇ ನಿಲ್ದಾಣಕ್ಕೆ ಸಚಿವ ವಿ. ಸೋಮಣ್ಣ ಬೇಟಿ

ಕುಂದಾಪುರ: ಕೊಂಕಣ್ ರೈಲ್ವೆ ವಿಲೀನ ಬಗ್ಗೆ ಮಂಗಳೂರಿನಲ್ಲಿಯೇ ಮೊದಲ ಸಭೆ ನಡೆಸಿದ್ದು, ಒಂದಂತೂ ಸತ್ಯ ಆದಷ್ಟು ಬೇಗ ನಿಮಗೆ ಒಳ್ಳೆಯ ಫಲಿತಾಂಶ ಕೊಡಲಾಗುವುದು. ರಾಮೇಶ್ವರ, ಅಯೋಧ್ಯೆ ರೈಲು ಆರಂಭಿಸುವ ಬಗ್ಗೆ ಸಹಿತ ಈ ಭಾಗದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಕರಾವಳಿಗೆ ನನ್ನ ಮೊದಲ ಆದ್ಯತೆಯಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಅವರು ರವಿವಾರ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಇಲ್ಲಿ ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ನವೀಕರಿಸಲಾದ ಕಾಮಗಾರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿ, ಸಮ್ಮಾನ ಸ್ವೀಕರಿಸಿ, ಮಾತನಾಡಿದರು.



ನಿಲ್ದಾಣದ ಅಭಿವೃದ್ಧಿಗೆ ಕೊಡುಗೆ ಕೊಟ್ಟ ದಾನಿಗಳ ಯಾವುದೇ ಬೋರ್ಡ್ ಗಳನ್ನು ತೆಗೆಯದಂತೆ ಸೂಚಿಸಿದ ಸಚಿವರು, ಈ ಕುರಿತಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈಲ್ವೆ ಕ್ಷೇತ್ರದ ಪ್ರಗತಿಗೆವಿಶೇಷ ಒತ್ತು ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಂತೆ ರೈಲು ನಿಲ್ದಾಣಗಳು ಸಹ ಇರಬೇಕು ಅನ್ನುವುದು ಅವರ ಆಶಯವಾಗಿದೆ. 1 ಲಕ್ಷ ಕಿ.ಮೀ. ರೈಲು ಮಾರ್ಗವಿದ್ದು, ಚೀನಾ ಬಿಟ್ಟರೆ ಭಾರತವೇ ಇರುವುದು. 50-65 ವರ್ಷಗಳಲ್ಲಿ ಆಗದ್ದನ್ನು ಕೆಲವೇ ವರ್ಷಗಳಲ್ಲಿ ಇನ್ನಷ್ಟು ಸಾಧಿಸಲಾಗುವುದು ಎಂದರು.



ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕರಾವಳಿಯ ಅನೇಕ ಬೇಡಿಕೆಗಳನ್ನು ಸಚಿವರು ಈಗಾಗಾಲೇ ತ್ವರಿತವಾಗಿ ಈಡೇರಿಸಿದ್ದಾರೆ. ಕೊಂಕಣ್ ರೈಲ್ವೆ ವಿಲೀನ ಸಂಬಂಧ ಅವರು ಸಹ ಬಹಳಷ್ಟು ಉತ್ಸುಕರಾಗಿದ್ದು, ಅದೊಂದು ಆದರೆ ಇಲ್ಲಿನ ಬಹುತೇಕ ಎಲ್ಲ ಸಮಸ್ಯೆಗಳು ಬಗೆಹರಿಯಲಿದೆ. ರೈಲು ಹಳಿ ಡಬ್ಲಿಂಗ್, ಕರಾವಳಿಯ ಎಲ್ಲ ನಿಲ್ದಾಣಗಳ ಉನ್ನತೀಕರಣ ಸಹಿತ ಮೂಲಸೌಕರ್ಯಗಳು ಆಗಬೇಕಿದೆ ಎಂದು ಮನವಿ ಮಾಡಿದರು.



ಇದೇ ವೇಳೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಸೋಮಣ್ಣ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಸೋಮಣ್ಣನವರು ನಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಲಯನ್ಸ್ ಕ್ಲಬ್ ನಿಂದ ಉತ್ತಮ ಕೊಡುಗೆ ಕೊಟ್ಟಿದ್ದಾರೆ. ನಿಲ್ದಾಣದಲ್ಲಿ ಇನ್ನಷ್ಟು ಬೇಡಿಕೆಗಳಿವೆ. ರಾಮೇಶ್ವರ, ಅಯೋಧ್ಯೆಗೆ ಕುಂದಾಪುರದಿಂದ ರೈಲು ಆರಂಭವಾದರೆ ಅನುಕೂಲ ಆಗಲಿದೆ ಎಂದು ಶಾಸಕ ಕಿರಣ್ ಕೊಡ್ಗಿ ಕೋರಿಕೊಂಡರು.



ಇದೇ ಸಂದರ್ಭ ಸಚಿವ ಸೋಮಣ್ಣ ಅವರು ರೈಲು ನಿಲ್ದಾಣಕ್ಕೆ 80 ಲಕ್ಷದ ಕೊಡುಗೆ ನೀಡಿದ ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿಕೋಸ್ತಾ ಅವರನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿ ಪ್ರದಾನಿ ನರೇಮದ್ರ ಮೋದಿಯವರೊಂದಿಗೆ ಭೆಟಿ ಮಾಡುವ ಭರವಸೆ ನೀಡಿದರು.



ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೊಂಕಣ್ ರೈಲ್ವೆಯ ಹಿರಿಯ ಅಧಿಕಾರಿಗಳಾದ ಸುನೀಲ್ ಗುಪ್ತಾ, ಆಶಾ ಶೆಟ್ಟಿ, ಲಯನ್ಸ್ ಕ್ಲಬ್ ನ ರೋವನ್ ಡಿಕೋಸ್ಟಾ, ಸಂದೀಪ್ ಶೆಟ್ಟಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಮತ್ತಿತರರು ಉಪಸ್ಥಿತರಿದ್ದರು. ಕೊಂಕಣ್ ರೈಲ್ವೆಯ ಎಂಜಿನಿಯರ್ ಲಿಖಿತಾ ಕಾರ್ಯಕ್ರಮ ನಿರೂಪಿಸಿದರು.