*ಜನಗಣತಿದಾರರ ಆಯ್ಕೆಯಲ್ಲಿ ಪ್ರೌಢಶಾಲಾ ಸಹಶಿಕ್ಷಕರಿಗೆ ಅನ್ಯಾಯ –ಅಸಮಾಧಾನ ಹೊರಹಾಕಿದ ಶಿಕ್ಷಕ ಸಂಘ*
ಕುಂದಾಪುರ: ಇಂದಿನಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಗ ಸಮೀಕ್ಷೆಗೆ ಗಣತಿದಾರರನ್ನು ಆಯ್ಕೆ ಮಾಡಲಾಗಿದ್ದು ಉಡುಪಿ ಜಿಲ್ಲೆಯಲ್ಲಿ ತಾರತಮ್ಯ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದೆ.

ಮಾಧ್ಯಮದ ಜೊತೆಗೆ ಮಾತನಾಡಿದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರೌಢಶಾಲೆಗಳ ಬೋಧಕ ಶಿಕ್ಷಕರನ್ನು ಗಣತಿದಾರರನ್ನಾಗಿ ಮೊದಲ ಆದ್ಯತೆಯಲ್ಲಿ ಪರಿಗಣಿಸಬಾರದು ಎಂದು ಸರ್ಕಾರ ಆದೇಶ ನೀಡಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದಿದ್ದಾರೆ. ಇದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶಗಳ ಮೇಲೆ ನೇರವಾಗಿ ಪರಿಣಾಮವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲೆ ಹೊರತುಪಡಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಇತರೆಡೆಗಳಲ್ಲಿ ಸರ್ಕಾರದ ಆದೇಶವನ್ನು ಪಾಲಿಸಲಾಗಿದೆ. ಆದರೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಶಿಕ್ಷಕರ ಮನವಿಯನ್ನು ನಿರ್ಲಕ್ಷ್ಯಿಸಿ ಗಣತಿದಾರರ ಪಟ್ಟಿ ಮಾಡಲಾಗಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಂಘದ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಮಾತನಾಡಿ, ಅನ್ಯ ಇಲಾಖೆಗಳ ಸಿಬ್ಬಂದಿಗಳು, ಮುಖ್ಯೋಪಾದ್ಯಾಯರುಗಳು, ದೈಹಿಕ ಶಿಕ್ಷಣ ಶಿಕ್ಷಕರು, ಖಾಸಗೀ ಶಾಲಾ ಬೋಧಕೇತರ ಸಿಬ್ಬಂದಿಗಳು ಹೀಗೇ ಆಯ್ಕೆ ಬಳಿಕವೂ ಗಣತಿದಾರರ ಕೊರತೆಯಾದಲ್ಲಿ ಮಾತ್ರ ಪ್ರೌಢಶಾಲೆಗಳ ಬೋಧಕ ಶಿಕ್ಷಕರನ್ನು ಗಣತಿದಾರರನ್ನಾಗಿ ಆಯ್ಕೆ ಮಾಡಬೇಕು. ಇದರಿಂದ ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಸಮಸ್ಯೆ ಉಂಟಾಗುವುದಿಲ್ಲ ಎಂದಿದ್ದಾರೆ. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಗಣತಿದಾರರ ಪಟ್ಟಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಈ ಸಂದರ್ಭ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.