ಪ್ರಜಾಪ್ರಭುತ್ವ ರಕ್ಷಣೆ ಸೆಲ್ಪೀ ಹೊಂಡದಲ್ಲಿಲ್ಲ ; ಜನಪ್ರತಿನಿಧಿಗಳ ಕೈಲಿದೆ – ಪೃಥ್ವೀರಾಜ್ ಶೆಟ್ಟಿಗೆ ಅಜಿತ್ ಶೆಟ್ಟಿ ಟಾಂಗ್

ಕೋಟ: ಪ್ರಜಾಪ್ರಭುತ್ವದ ರಕ್ಷಣೆ ಎನ್ನುವ ಸ್ಲೋಗನ್ ನೊಂದಿಗೆ ರಸ್ತೆ ಹೊಂಡಗಳ ಸೆಲ್ಪೀ ತೆಗೆಯುವುದನ್ನು ಬಿಟ್ಟು ನಿಮ್ಮದೇ ಪಕ್ಷದ ಶಾಸಕರು, ಸಂಸದರನ್ನು ಹೊಂಡದ ಮುಂದೆ ತಂದು ನಿಲ್ಲಿಸಿ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ವಡ್ಡರ್ಸೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಗುಂಡಿಯೊಂದಿಗೆ ಸೆಲ್ಫಿ ತೆಗೆದು “ಪ್ರಜಾಪ್ರಭುತ್ವ ರಕ್ಷಣೆ” ಎನ್ನುವ ಶೋ ಮಾಡುತ್ತಿರುವ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ ಶೆಟ್ಟಿ ಅವರ ನಡೆ ತೀರಾ ಬಾಲಿಶವಾದುದು ಮಾತ್ರವಲ್ಲ ತಿಳಿಗೇಡಿತನದ ಪ್ರಕ್ರಿಯೆ ಎಂದು ಅವರು ಛೇಡಿಸಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆ ಹೊಂಡಗಳ ಮುಂದೆ ಮಾಡುವುದಲ್ಲ, ರೋಡ್ ವೇ ಪಿ.ಆರ್. ಮಾಡುವುದು ಬಿಟ್ಟು ರೋಡ್ ವೇ ಸೊಲ್ಯೂಷನ್ ಬಗ್ಗೆ ಚಿಂತಿಸಿ. ರಾಜ್ಯ ಸರ್ಕಾರ ಪ್ರತೀ ಶಾಸಕರಿಗೆ 25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಪರ್ಸಂಟೇಜ್ ಹೊಡೆಯುವುದನ್ನು ಬಿಟ್ಟು ಅಭಿವೃದ್ಧಿಗೆ ಬಳಸುವಂತೆ ನಿಮ್ಮ ಶಾಸಕರಿಗೆ ಕಿವಿ ಮಾತು ಹೇಳಿ ಎಂದು ವ್ಯಂಗ್ಯವಾಡಿದ್ದಾರೆ. ಬೇಕಿದ್ದರೆ ಶಾಸಕರನ್ನು ಗುಂಡಿಗಳ ಮುಂದೆ ನಿಲ್ಲಿಸಿ ಸೆಲ್ಫೀ ತೆಗೆಯಿರಿ ಎಂದಿದ್ದಾರೆ.
ಪೃಥ್ವೀರಾಜ್ ಶೆಟ್ಟಿಗೆ ನೇರವಾಗಿ ಸವಾಲು ಹಾಕಿರುವ ಅಜಿತ್ ಶೆಟ್ಟಿ, “ನೀವು ಬಿಜೆಪಿ ಗೆ ಹೋಗುವ ಮೊದಲು ಎಲ್ಲಿದ್ದಿರಿ ಎನ್ನುವುದು ನೆನಪಿದೆಯಾ? ಈ ಹಿಂದೆ ಕುಂದಾಪುರದ ಮಾಜೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ತೇಜೋವಧೆ ಮಾಡಿರುವುದನ್ನು ಯಾರೂ ಮರೆತಿಲ್ಲ. ಈಗ ನಿಮ್ಮ ಬಿಜೆಪಿ ನಿಷ್ಠೆ ಮತ್ತು ಪಾಠದ ಅಗತ್ಯ ಬಹುಃಷ ಬಿಜೆಪಿಯವರಿಗೂ ಇಲ್ಲವಾಗಿದೆ. ಗೋ ಪ್ರೇಮದ ಹೆಸರಿನಲ್ಲಿ ಸ್ಟಂಟ್ ಮಾಡುವ ನೀವುಗಳು ನಿಮ್ಮ ಮನೆಯಲ್ಲಿ ದನ ಸಾಕುತ್ತಿದ್ದೀರಾ ಮೊದಲು ನೋಡಿಕೊಳ್ಳಬೇಕು. ಜೊತೆಗೆ ಕಾಂಗ್ರೆಸ್ ನಾಯಕರ ಮನೆಯಲ್ಲಿ ಹೇಗೆ ದನ ಸಾಕುತ್ತಾರೆ ಎನ್ನುವುದನ್ನು ಒಂದು ಸಲ ನೋಡಿ ಬನ್ನಿ ಎಂದು ಕಿಡಿಕಾರಿದ್ದಾರೆ.