ಆಜ್ರಿಯಲ್ಲಿ ಅಪಾಯ ಅಹ್ವಾನಿಸುತ್ತಿರುವ ಮತ್ತೊಂದು ಬಸ್ ನಿಲ್ದಾಣ! ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ಯಾವಾಗ?
ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ, ವಾಸ್ತವ.ಕಾಮ್ ಕುಂದಾಪುರ

ಕುಂದಾಪುರ: ಕಳೆದ ಮೂರು ವರ್ಷಗಳಿಂದ ಅಪಾಯ ಆಹ್ವಾನಿಸುತ್ತಿದ್ದ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರೆಬೇರುಕಟ್ಟೆ ಬಸ್ ನಿಲ್ದಾಣಕ್ಕೆ ಗ್ರಾಮಸಭೆಯ ಎರಡು ದಿನಗಳ ಮೊದಲು ಮುಕ್ತಿ ಸಿಕ್ಕಿದೆ. ಆದರೆ ಆಜ್ರಿ ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ತಗ್ಗುಂಜೆ ಬಸ್ ನಿಲ್ದಾಣ ಮತ್ತೊಂದು ಕನ್ನಡಿ ಹಿಡಿದಿದೆ.

ಪ್ರತಿ ದಿನ ಸುಮಾರು ಇನ್ನೂರಕ್ಕೂ ಹೆಚ್ವು ಪ್ರಯಾಣಿಕರು ಈ ಬಸ್ ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಆದರೆ ಆಜ್ರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗಾಗಲೀ, ಇಲ್ಲಿನ ಜನರ ವೋಟು ಪಡೆದು ಆಯ್ಕೆಯಾದ ಜನಪ್ರತಿನಿಧಿಗಳಿಗಾಗಲೀ ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವದಾನ ಇಲ್ಲದಂತಾಗಿದೆ.

ತಗುಂಜೆ ಬಸ್ಸು ನಿಲ್ದಾಣ ದುರಸ್ತಿ ಆಗದೆ ಕೆಲವು ವರ್ಷಗಳೇ ಕಳೆದಿವೆ. ಬಸ್ ಸ್ಟ್ಯಾಂಡ್ ಮಾಡು ಯಾವ ಪ್ರಯಾಣಿಕನ ತಲೆ ಮೇಲೆ ಬೀಳುತ್ತದೆಯೋ ಎನ್ನುವ ಭಯ ಶುರುವಾಗಿದೆ. ಬಸ್ ನಿಲ್ದಾಣದ ಒಳಗಿನ ನೆಲವುಇ ಗುಂಡಿ ಬಿದ್ದು ಬಾವಿಯಂತಾಗಿದೆ. ಸುಮಾರು 50ಕ್ಕೂ ಹೆಚ್ಚು ಮಕ್ಕಳು ಈ ನಿಲ್ದಾಣವನ್ನು ಪ್ರತಿದಿನ ಆಶ್ರಯಿಸುತ್ತಿದ್ದಾರೆ.

ಅಲ್ಲದೇ ಶಿನ್ನಾಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಗುಂಜಾಡಿ, ಆಜ್ರಿ ಶನೇಶ್ವರ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೂ ಈ ನಿಲ್ದಾಣ ಆಸ್ರಯ ನೀಡುತ್ತದೆ. ದೂರದ ಗುಂಜಾಡಿ, ಎಳಬೇರು, ಬಾಳಿಗದ್ದೆ, ಕೊಡ್ಜನಮಕ್ಕಿ, ಬೆಳುವಾಣ, ರಾಮನಕೊಡ್ಲು, ಆರ್ಗೋಡು, ಮೆಟ್ಸಂಕ, ಮೇಲ್ ಮನೆ, ಚವಡಿಮನೆ, ಗಾಣದಮನೆ, ಧ್ಯಾಗೇರಿ, ಮೇಲ್ ಬೆಳುವಾಣ, ಕಗ್ಗನಕೊಡ್ಲು, ಹಕ್ಕಲ ಮನೆ, ಚೋನಮನೆ, ತಗ್ಗುಂಜೆ, ಮಕ್ಕಿಮನೆ, ಹುಣ್ಸೆಹಾಡಿ, ಬೆಟ್ಟಬೈಲು, ಅರಕೋಡಿ, ಚಾವರದ ಮನೆ ಹೀಗೆ ಹಲವು ಊರುಗಳಿಗೆ ಈ ಬಸ್ ನಿಲ್ದಾಣ ಕೊಂಡಿಯಾಗಿದೆ.

ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತಗ್ಗುಂಜೆ ಬಸ್ ನಿಲ್ದಾಣದ ದುರಸ್ತಿಗೆ ಮನಸ್ಸು ಮಾಡುವರೇ ಕಾದು ನೋಡಬೇಕಿದೆ.