ಅಮಾಸೆಬೈಲಿನಲ್ಲಿ ವಿವಾಹಿತ ಮಹಿಳೆಗೆ ಲೈಂಗಿಕ ದೌರ್ಜನ್ಯ : ಸಂಸದ ಶ್ರೀನಿವಾಸ ಪೂಜಾರಿ ಯಾಕೆ ಮಾತನಾಡುತ್ತಿಲ್ಲ? – ಕೋಟ ನಾಗೇಂದ್ರ ಪುತ್ರನ್ ಪ್ರಶ್ನೆ
ಕುಂದಾಪುರ: ಧರ್ಮ ಸಂರಕ್ಷಣೆ ಹೆಸರಿನಲ್ಲಿ ಮನೆಗೆ ಆಮಂತ್ರಣ ಪತ್ರಿಕೆ ಕೊಡಲು ಬಂದ ಮಹಿಳೆಗೆ ಕಿರುಕುಳ ನೀಡಿರುವ ಆರೋಪಿ ಅನ್ನು ಬಂಧಿಸಲು ಪೊಲೀಸ್ ಇಲಾಖೆ ಮೀನ ಮೇಷ ಎಣಿಸುತ್ತಿದೆ. ಬಿಲ್ಲವ ಸಮಾಜದ ಮಹಿಳೆಗಾದ ಅನ್ಯಾಯಕ್ಕೆ ಬಿಲ್ಲವ ಸಮಾಜದ ಪ್ರತಿನಿಧಿ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಯಾಕೆ ಮಾತನಾಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಾಂಗ್ರೆಸ್ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ.

ಅವರು ಭಾನುವಾರ ಅಮಾಸೆಬೈಲಿನಲ್ಲಿ ನಡೆದ ಬಿಲ್ಲವ ಸಂಘಟನೆಗಳು, ವಿವಿಧ ಸಂಘಟನೆಗೆಳು ಹಾಗೂ ಗ್ರಾಮಸ್ಥರು ಹಮ್ಮಿಕೊಂಡ ಪ್ರತಿಭಟನಾ ಸಭೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು. ಧರ್ಮ ರಕ್ಷಣೆ ಹೆಸರಿನಲ್ಲಿ ಇಂತಹ ಕಾಮಾಂಧರು ಎಷ್ಟೋ ಹೆಣ್ಣು ಮಕ್ಕಳ ಜೀವನದಲ್ಲಿ ಆಟ ಆಡಿದ್ದಾರೆ. ಇಂತಹ ಕಾಮಾಂಧರಿಗೆ ಆಸರೆ ಆಗಿರುವವರು ಯಾರು? ಎನ್ನುವುದನ್ನು ಪೊಲೀಸರು ತನಿಖೆ ಮೂಲಕ ಬಯಲಿಗೆಳೆಯಬೇಕು ಎಂದ ಅವರು, ಯಾವುದೇ ಒಬ್ಬ ನಿಜವಾದ ಧರ್ಮ ಸಂರಕ್ಷಕರು ಯಾರೂ ಅಕ್ಕ, ತಂಗಿಯ ರೂಪದಲ್ಲಿ ಸಮಾಜ ಸೇವೆ ಮಾಡಿಕೊಂಡು ಸಂಘ, ಸಂಸ್ಥೆಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಈ ರೀತಿ ಮೃಗಗಳಂತೆ ವರ್ತಿಸುವುದಿಲ್ಲ ಎಂದಿದ್ದಾರೆ.

ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷನಾಗಿದ್ದ ನವೀನ್ಚಂದ್ರ ಶೆಟ್ಟಿ ಬಿಜೆಪಿಯ ಪ್ರಮುಖನಾಗಿದ್ದಾನೆ. ಹಿಂದುತ್ವದ ಅಜೆಂಡಾ ಹೊಂದಿರುವ ಬಿಜೆಪಿ ಶಾಸಕರು ಮತ್ತು ಸಂಸದರು ತನ್ನ ಪಕ್ಷದ ನಾಯಕನನಾಗಿರುವ ಆರೋಪಿಗೆ ಬೆಂಬಲ ನೀಡುವುದಿಲ್ಲ ಎಂದು ಯಾಕೆ ಬಹಿರಂಗ ಹೇಳಿಕೆ ನೀಡುತ್ತಿಲ್ಲ? ಎಂದವರು ಪ್ರಶ್ನಿಸಿದ್ದಾರೆ.

ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಇದ್ದರೆ, ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಬದಲಾಗಿ ಹೆಣ್ಣು ರಕ್ಷತಿ ರಕ್ಷಿತಃ ಅಭಿಯಾನವನ್ನು ಆರಂಭಿಸಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಬಿಲ್ಲವ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ನಾಯಕರು, ಗೋಪಾಲ್ ಕೋಟ, ವಸಂತ್ ಸುವರ್ಣ, ಜಗನಾಥ್ ಅಮೀನ್ ಸಾಲಿಗ್ರಾಮ, ಕಿಶೋರ್ ಶೆಟ್ಟಿ ಕೋಟ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.