ಅಮಾಸೆಬೈಲು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ ಬಂಧನಕ್ಕೆ ಬಿಲ್ಲವ ಸಂಘಟನೆ ಆಗ್ರಹ ಪ್ರತಿಭಟನೆ ಎಸ್ಪಿಗೆ ಮನವಿ
ಕುಂದಾಪುರ: ಎಂಟು ದಿನಗಳ ಹಿಂದೆ ಅಮಾಸೆಬೈಲು ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ ಎಂದು ಆರೋಪಿಸಿ ಕುಂದಾಪುರ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಅಮಾಸೆಬೈಲು, ರಟ್ಟಾಡಿ ಮತ್ತಿ ಮಚ್ಚಟ್ಟು ಪ್ರದೇಶಗಳ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ಅಮಾಸೆಬೈಲಿನ ಗರಡಿಯಲ್ಲಿ ಪ್ರತಿಭಟನೆ ನಡೆಸಿದರು.



ಈ ಸಂದರ್ಭ ಮಾತನಾಡಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅವರು, ಸುಮಾರು ಎಂಟು ದಿನಗಳ ಹಿಂದೆ ಈ ಭಾಗದ ಬಿಲ್ಲವ ಸಮಾಜದ ಬಡ ಮಹಿಳೆ ಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆದರೆ ಆರೋಪಿಯನ್ನು ಇದುವರೆಗೂ ಪೊಲೀಸರು ಬಂಧಿಸಿಲ್ಲ. ಈ ಕುರಿತಾಗಿ ತಪ್ಪಿತಸ್ಥ ಆರೋಪಿಯನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.




ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಲ್ಲವ ಸಮಾಜದ ಮಹಿಳಾ ಮುಖಂಡ ಸುಮನಾ ಬಿದ್ಕಲ್ಕಟ್ಟೆ ಅವರು ಮಾತನಾಡಿ, ಯಾವುದೇ ಮಹಿಳೆಗೆ ದೌರ್ಜನ್ಯವಾದರೆ ಅದನ್ನು ಸಹಿಸಿಕೊಂಡು ಸುಮ್ಮನೆ ಕೂರಲಾಗುವುದಿಲ್ಲ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಬೇಕಿದೆ. ಸಂತ್ರಸ್ಥ ಮಹಿಳೆಯ ಪರ ಯಾವತ್ತು ನಾವು ಜೊತೆಯಲ್ಲಿ ಇರುತ್ತೇವೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದರು.



ಬಳಿಕ ಅಮಾಸೆಬೈಲು ಪೊಲೀಸ್ ಠಾಣೆಗೆ ಬಂದ ಪ್ರತಿಭಟನಾಕಾರರು ಉಡುಪಿ ಜಿಲ್ಲಾ ಎಸ್ ಪಿ ಅವರಿಗೆ ಅಮಾಸೆಬೈಲು ಠಾಣಾಧಿಕಾರಿ ಅಶೋಕ್ ಮೂಲಕ ಮನವಿ ಸಲ್ಲಿಸಲಾಯಿತು. ಆರೋಪಿ ರಟ್ಟಾಡಿ ನವೀನಚಂದ್ರ ಶೆಟ್ಟಿ ಧರ್ಮಸ್ಥಳ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷನಾಗಿದ್ದು ತಾಲೂಕು ಪಂಚಾಯತ್ ಮಾಜಿ ಸದಸ್ಯನಾಗಿದ್ದು ತನ್ನ ರಾಜಕೀಯ ಪ್ರಭಾವ ಬಳಸಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಆರೋಪಿಯನ್ನ ಅತೀ ಶೀಘ್ರವಾಗಿ ಬಂಧಿಸಿ ನೊಂದ ಮಹಿಳಾ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಟ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.